ಭಾನುವಾರ, ಏಪ್ರಿಲ್ 2, 2023
32 °C

ಅಲಯನ್ಸ್ ವಿಶ್ವವಿದ್ಯಾಲಯದ ಮಧುಕರ್ ಅಂಗೂರ್‌ಗೆ ನ್ಯಾಯಪೀಠದ ಖಡಕ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂರು ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಕ್ರಿಮಿನಲ್‌ ಪ್ರಕರಣದಲ್ಲಿ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ ಜಿ.ಅಂಗೂರ್‌ ಅವರ ಜಾಮೀನು ರದ್ದುಪಡಿಸಲು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಪರ ಹಿರಿಯ ವಕೀಲರಿಗೆ ಬೆದರಿಕೆ ಹಾಕಿರುವುದಕ್ಕೆ ಹೈಕೋರ್ಟ್ ಕಿಡಿ ಕಾರಿದೆ.

ಜಾಮೀನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ಮತ್ತು ಅಲಯನ್ಸ್ ಬ್ಯುಸಿನೆಸ್ ಸ್ಕೂಲ್‌ನ ನಿರ್ದೇಶಕ ಅಭಯ್ ಛೆಬ್ಬಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ಘಟನೆಯನ್ನು ಸಹಿಸುವುದಿಲ್ಲ’ ಎಂದು ಮಧುಕರ್ ಅಂಗೂರ್‌ಗೆ ಖಡಕ್‌ ಎಚ್ಚರಿಕೆ ನೀಡಿದೆ.

ಅಲಯನ್ಸ್ ವಿವಿ ರಿಜಿಸ್ಟ್ರಾರ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಎಂ.ಎಸ್‌. ಶ್ಯಾಮಸುಂದರ್, ‘ಇತ್ತೀಚೆಗೆ ನನ್ನ ಮನೆಯ ಮುಂದೆ ಕೆಲವು ಸಮಾಜಘಾತುಕ ವ್ಯಕ್ತಿಗಳು ಸುಳಿದಾಡಿದ್ದಾರೆ. ನನಗೆ ಬೆದರಿಕೆಯಿದೆ. ನನ್ನ ಮಹಿಳಾ ಸಹೋದ್ಯೋಗಿಯ ಚಲನವಲನಗಳ ಮೇಲೂ ಮಧುಕರ್ ಅಂಗೂರ್ ಪರ ವ್ಯಕ್ತಿಗಳು ನಿಗಾ ಇಟ್ಟಿದ್ದಾರೆ’ ಎಂದು ನ್ಯಾಯಪೀಠಕ್ಕೆ ದೂರಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಈ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಮಧುಕರ್ ಅಂಗೂರ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮಧುಕರ ಅಂಗೂರ್‌, ‘ನನ್ನ ನಿರ್ದೇಶನದಡಿ ಇಂತಹ ಯಾವುದೇ ಘಟನೆ ನಡೆದಿಲ್ಲ. ನಾನೊಬ್ಬ ಕಾನೂನು ಪರಿಪಾಲಕ ನಾಗರಿಕ. ಒಂದು ವೇಳೆ ನನ್ನ ಅನುಯಾಯಿಗಳು ತಿಳಿದೋ, ತಿಳಿಯದೆಯೋ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅದಕ್ಕಾಗಿ ನ್ಯಾಯಾಲಯದ ಬೇಷರತ್‌ ಕ್ಷಮೆ ಕೋರುತ್ತೇನೆ‘ ಎಂದು ಪ್ರಮಾಣಪತ್ರ ಸಲ್ಲಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲು ನ್ಯಾಯಾಲಯ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿ ವಿಚಾರಣೆಯನ್ನು ಮಾರ್ಚ್ 1ಕ್ಕೆ ಮುಂದೂಡಿದೆ.

ಪ್ರಕರಣವೇನು?:‘ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ಆರ್ಥಿಕ ವಹಿವಾಟು ನಡೆಸಬಾರದು ಎಂದು ಮಧುಕರ ಅಂಗೂರ್ ಅವರಿಗೆ ಬೆಂಗಳೂರು ಸಿವಿಲ್ ನ್ಯಾಯಾಲಯ ನಿರ್ದೇಶಿಸಿತ್ತು. ಆದರೂ ಮೆಸರ್ಸ್ ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಮೆಸರ್ಸ್ ಶ್ರೀವಾರಿ ಶೈಕ್ಷಣಿಕ ಸೇವೆಗಳು ಹೆಸರಿನ ಸಂಸ್ಥೆಯ ಅಡಿಯಲ್ಲಿ 2016ರಿಂದ 2017ರ ಅವಧಿಯಲ್ಲಿ ಪ್ರತ್ಯೇಕ ಖಾತೆ ತೆರೆದು, ಒಟ್ಟು ₹ 107 ಕೋಟಿ ಮೊತ್ತವನ್ನು ತಮ್ಮ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ’ ಎಂದು ಆರೋಪ ಮಧುಕರ ಅಂಗೂರ್ ಮೇಲಿತ್ತು.

ಈ ಆರೋಪಕ್ಕೆ ಸಂಬಂಧಿಸಿದಂತೆ ಆನೇಕಲ್, ಜೆ.ಪಿ. ನಗರ, ಮಡಿವಾಳ ಮತ್ತು ಶಂಕರಪುರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮಧುಕರ ಅಂಗೂರ್ ಅವರನ್ನು ಬಂಧಿಸಿತ್ತು. ಹೈಕೋರ್ಟ್, 2022ರ ಮೇ 3ರಂದು ಮಧುಕರ್ ಅಂಗೂರ್‌ಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಅಲಯನ್ಸ್ ವಿಶ್ವವಿದ್ಯಾಲಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು