ಯಲಹಂಕ: ಜೈ ಮಾದಿಗರ ಬೌದ್ಧಿಕ ವೇದಿಕೆ ಆಶ್ರಯದಲ್ಲಿ ಇದೇ 29ರಂದು ವಿಶ್ವ ಮಾದಿಗ ಬೃಹತ್ ಸಮಾವೇಶವನ್ನು ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು ತಿಳಿಸಿದರು.
‘ರಾಜ್ಯದಲ್ಲಿ ಮಾದಿಗ ಸಮುದಾಯವು 80 ಲಕ್ಷಕ್ಕೂ ಹೆಚ್ಚು ಹಾಗೂ ಭಾರತದಲ್ಲಿ 25 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಆದರೆ ಈ ಸಮುದಾಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ಕಲ್ಪಿಸಿರುವ ಆರ್ಥಿಕ, ಶೈಕ್ಷಣಿಕ ಮತ್ತಿತರ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿದಿನ ಒಂದೊಂದು ದಿನಾಚರಣೆಯನ್ನು ಮಾಡುತ್ತಿರುವಂತೆ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯಕ್ಕೆ ಪ್ರತಿವರ್ಷ ಡಿಸೆಂಬರ್ 29ನ್ನು ಮಾದಿಗರ ದಿನ ಎಂದು ಘೋಷಿ, ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಅಂದು ಬೆಳಿಗ್ಗೆ 10.30ಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್, ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಗೆಡ್ಡಂ ಬಾಪಿರಾಜು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಭಾರತದ ವಿವಿಧ ರಾಜ್ಯಗಳು ಸೇರಿದಂತೆ ಪ್ರಪಂಚದ ಮೂಲೆಮೂಲೆಯಿಂದ ಸಮುದಾಯದ ಜನ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.