ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ ಬೇಜವಾಬ್ದಾರಿಯಿಂದ ಮಡಿವಾಳ ಕೆರೆಗೆ ದುಸ್ಥಿತಿ’–ತೇಜಸ್ವಿ ಸೂರ್ಯ

ಕೆರೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಸ್ಥಳೀಯರು
Last Updated 14 ಮಾರ್ಚ್ 2021, 22:47 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯ ಬೇಜವಾಬ್ದಾರಿಯಿಂದ ಮಡಿವಾಳ ಕೆರೆ ತ್ಯಾಜ್ಯಗಳಿಂದ ಆವರಿಸಿಕೊಂಡು ದುಸ್ಥಿತಿಗೆ ತಲುಪಿದೆ. ಪರಿಸರ ಚಿಂತಕರುಹಾಗೂ ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಇದನ್ನು ಮಾದರಿ ಕೆರೆಯನ್ನಾಗಿ ಪರಿವರ್ತಿಸಲು ಕಾರ್ಯಯೋಜನೆ ರೂಪಿಸಲಾಗುವುದು’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ರೈನ್ ಬೋ ಮಕ್ಕಳ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಡಿವಾಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಭಾನುವಾರ ಮಡಿವಾಳ ಕೆರೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿತು.

‘ನಗರದ ಶೇ 90ರಷ್ಟು ಸಮಸ್ಯೆಗಳಿಗೆ ಮೂಲ ಕಾರಣವೇ ಬಿಬಿಎಂಪಿ. ಅದರ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯಿಲ್ಲ. ಮಡಿವಾಳ ಕೆರೆಯನ್ನು ಅರಣ್ಯ ಇಲಾಖೆಯಿಂದ ಪಾಲಿಕೆಗೆ ಹಸ್ತಾಂತರಿಸಿದ ಬಳಿಕ ನಿರ್ವಹಣೆ ಕೊರತೆಯಿಂದ ಸೊರಗಿದೆ. ಈ ಬಗ್ಗೆ ಸ್ಥಳೀಯರು ಹಲವಾರು ಬಾರಿ ಪಾಲಿಕೆಗೆ ದೂರು ನೀಡಿದರೂ ಕ್ರಮಕೈಗೊಳ್ಳದಿರುವುದು ವಿಪರ್ಯಾಸ. ಈ ಕೆರೆಯ ಕೆಲಸವು ನನ್ನ ವ್ಯಾಪ್ತಿಗೆ ಬರದಿದ್ದರೂ ಆದ್ಯತೆಯಾಗಿ ತೆಗೆದುಕೊಂಡು, ಕೆರೆ ಸಂರಕ್ಷಣೆಗೆ ಕೈ ಜೋಡಿಸುತ್ತೇನೆ. ಖುದ್ದಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಈ ಕೆರೆಯ ನಿರ್ವಹಣೆಯನ್ನ ಮತ್ತೆ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ತೇಜಸ್ವಿ ಸೂರ್ಯ ಹೇಳಿದರು.

ಸ್ಥಳೀಯ ನಿವಾಸಿ ಹಾಗೂ ರೈನ್ಬೋ ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಸುಮನ್ ಸಿಂಗ್ ಮಾತನಾಡಿ, ‘ಕೆರೆಯ ಪ್ರದೇಶಕ್ಕೆ ವಾಯುವಿಹಾರಕ್ಕೆ ಪ್ರತಿನಿತ್ಯ ಬರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಾತಾವರಣ ಆರೋಗ್ಯ ಪೂಣವಾಗಿಲ್ಲ. ಎಲ್ಲೆಂದರಲ್ಲಿ ಕಸ ಹಾಕಲಾಗಿದೆ. ಬಿಬಿಎಂಪಿ ಕಿಂಚಿತ್ತೂ ನಿರ್ವಹಣೆ ಮಾಡಿಲ್ಲ. ಹೀಗಾಗಿ, ಕೂಡಲೇ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ವಾಯುವಿಹಾರಿಗಳಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಮಡಿವಾಳ ಭಾಗದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ‘ಮಡಿವಾಳ ಕೆರೆಯನ್ನು ಜೀವವೈವಿಧ್ಯ ಉದ್ಯಾನವನ್ನಾಗಿ ಮಾಡಬೇಕು. ಅದೇ ರೀತಿ, ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸಿ, ಕೆರೆಯ ನಿರ್ವಹಣೆಯನ್ನು ಬಿಬಿಎಂಪಿಯಿಂದ ಅರಣ್ಯ ಇಲಾಖೆಯ ವ್ಯಾಪ್ತಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು’ ಎಂದು ಸಂಸದರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT