ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಇಡೀ ದಿನ ಆರಾಧನೆಗೆ ಬೆಂಗಳೂರು ಸಜ್ಜು, ವಿಶೇಷ ಪೂಜೆಗೆ ವ್ಯವಸ್ಥೆ

ತಳಿರು, ತೋರಣ ವಿದ್ಯುತ್ ದೀಪಗಳಿಂದ ಅಲಂಕಾರ
Last Updated 10 ಮಾರ್ಚ್ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಶಿವರಾತ್ರಿ ಆಚರಣೆ ಸಂಬಂಧ ನಗರದ ಶಿವ ದೇವಾಲಯಗಳು ವಿಶೇಷ ಅಲಂಕಾರಗಳಿಂದ ಸಜ್ಜಾಗಿದ್ದು, ಗುರುವಾರ ಮುಂಜಾನೆಯಿಂದಲೇ ರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ವಿವಿಧ ಸಂಘ–ಸಂಸ್ಥೆಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗಳು ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದಕಾಡು ಮಲ್ಲೇಶ್ವರ ದೇವಾಲಯ, ಟೆಂಪಲ್‌ ಸ್ಟ್ರೀಟ್‌ನ ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ,ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಕೋಣನಕುಂಟೆಯ ಚಂದ್ರಚೂಡೇಶ್ವರ ದೇವಸ್ಥಾನ, ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನ, ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಟೇಶ್ವರ ದೇವಸ್ಥಾನ ಸೇರಿದಂತೆ ನಗರದಲ್ಲಿ ಶಿವಾಲಯಗಳು ಮಹಾಶಿವರಾತ್ರಿ ಆಚರಣೆಗೆ ಸಜ್ಜಾಗಿವೆ.

ವಿಶೇಷ ಪೂಜೆ, ಪುನಸ್ಕಾರ ಮತ್ತು ರುದ್ರಾಭಿಷೇಕ, ಕ್ಷೀರಾಭಿಷೇಕ,ಬಿಲ್ವ ಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ‘ಓಂ ನಮಃ ಶಿವಾಯ’ ಮಂತ್ರಗಳು, ಶಿವನಾಮ ಸ್ಮರಣೆ, ಜಪ, ತಪಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಕಾರಣ ಭಕ್ತರ ದಟ್ಟಣೆ ತಡೆಯಲು ದೇವಸ್ಥಾನದ ಆಡಳಿತ ಮಂಡಳಿಗಳು ದೇವಾಲಯದ ಆವರಣಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಿವೆ. ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ದೇವಸ್ಥಾನಗಳು ಅಲಂಕಾರಗೊಂಡಿವೆ.

ಸಾಂಸ್ಕೃತಿಕ ಕಾರ್ಯಕ್ರಮ: ಜಾಗರಣೆ ಸಂಬಂಧ ಸಂಜೆಯ ನಂತರ ನಗರದ ನಾನಾ ದೇವಸ್ಥಾನ, ಮೈದಾನಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ದೇವಸ್ಥಾನ ಆಡಳಿತ ಮಂಡಳಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ.ರಾತ್ರಿಯಿಡೀಶಿವ ಸಂಗಮ, ಶಿವ ಅಂತ್ಯಾಕ್ಷರಿ, ಶಿವ ಧ್ವನಿ, ಶಿವ ಸಂಗಂ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿವೆ. ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘವು ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗಾಗಿ ‘ಮೃತ್ತಿಕಾ ಶಿವಲಿಂಗ ದರ್ಶನ’ ಏರ್ಪಡಿಸಿದೆ. ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿನ ಶ್ರೀಕಂಠೇಶ್ವರ ಭವನದಲ್ಲಿ ಭಜನೆ, ವೇದಪಾರಾಯಣ ನಡೆಯಲಿದೆ. ಅಲ್ಲಿ ಯಲಹಂಕದ ಶ್ರೀ ಶಾರದಾದೇವಿ ಆಧ್ಯಾತ್ಮಿಕ ಸಂಘವು ಮಧ್ಯಾಹ್ನ 12ಕ್ಕೆ ‘ಶಿವ ಕೀರ್ತನೆ’ ಹಮ್ಮಿಕೊಂಡಿದೆ. ಕುಮಾರಸ್ವಾಮಿ ಬಡಾವಣೆಯ ಬ್ರಾಹ್ಮಣ ಸೇವಾ ಸಂಘದ ಮಹಿಳಾ ವಿಭಾಗದ ಜಯಲಕ್ಷ್ಮೀ ತಂಡ ಹಾಗೂ ಟಿ. ದಾಸರಹಳ್ಳಿಯ ಶ್ರೀ ವಿನಾಯಕ ಭಜನಾ ಮಂಡಳಿಯ ಭಾಗ್ಯ ಮಂಜುನಾಥ್ ನೇತೃತ್ವದ ತಂಡವು ಸಂಜೆ 5ಕ್ಕೆ ಭಜನೆ ಆಯೋಜಿಸಿದೆ. ಸಂಜೆ 6ಕ್ಕೆ ರುದ್ರಾಭಿಷೇಕ ನಡೆಯಲಿದೆ.

ಛಾಯಾಚಿತ್ರ ಪ್ರದರ್ಶನ: ಕೆಂಗೇರಿಯ ಏಕದಳ ಬಿಲ್ವ ಬಂಡೇಮಠ ಸಂಸ್ಥಾನ ಮತ್ತು ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್‌ ಬಂಡೇಶ್ವರಸ್ವಾಮಿ ಶಿವಯೋಗಿಗಳ ಭವನದಲ್ಲಿ ಹವ್ಯಾಸಿ ಛಾಯಾಚಿತ್ರಗಾರ ಚಕ್ರಪಾಣಿ ಸೆರೆಹಿಡಿದ ಶಿವ ದೇವಾಲಯಗಳು, ವಿಗ್ರಹಗಳ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.

ರಾತ್ರಿ ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ
ಶಿವರಾತ್ರಿ ಹಬ್ಬದ ಪ್ರಯುಕ್ತ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಪ್ರತಿಷ್ಠಾನವು ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಂಜೆ 7 ಗಂಟೆಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥ ನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

35 ಅಡಿ ಎತ್ತರದ ವಿಗ್ರಹ ನಿರ್ಮಾಣ
ಕೋವಿಡ್ ನಿರ್ಮೂಲನಗೆ ಪ್ರಾರ್ಥಿಸುವ ಸಂಬಂಧ ವಿಮೋಚನಾ ವೆಲ್ಫೇರ್ ಟ್ರಸ್ಟ್ 8 ಮಂದಿ ಕಲಾವಿದರ ನೆರವಿನಿಂದ 35 ಅಡಿ ಎತ್ತರದ ಶಿವನ ವಿಗ್ರಹವನ್ನು ನಿರ್ಮಿಸಿದೆ. ಅದಕ್ಕೆ ಕೊರೊನಾ ಶಿವ ಎಂದು ಹೆಸರಿಡಲಾಗಿದೆ. ಈ ವಿಗ್ರಹವನ್ನು ವಿಲ್ಸನ್‌ ಗಾರ್ಡನ್‌ನ ಬಿಬಿಎಂಪಿ ಮೈದಾನದಲ್ಲಿ ಇರಿಸಲಾಗಿದೆ. ಗುರುವಾರ ವಿಶೇಷ ಪೂಜೆಗಳು ನಡೆಯಲಿವೆ. ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈ ವಿಗ್ರಹವು ಮಾ.14ರವರೆಗೆ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶೇಷಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್ ಬೆಳಿಗ್ಗೆ 8 ಗಂಟೆಯಿಂದ ಶತ ರುದ್ರಾಭಿಷೇಕ, ಏಕವಾರ ರುದ್ರಾಭಿಷೇಕ ಹಮ್ಮಿಕೊಂಡಿದೆ. ವೈದಿಕ ಧರ್ಮ ಸನಾತನ ಟ್ರಸ್ಟ್ ಸಂಜೆ 6 ಗಂಟೆಗೆ ಆರ್ಟ್ ಆಫ್‌ ಲಿವಿಂಗ್‌ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಂದ ಆನ್‌ಲೈನ್ ಉಪನ್ಯಾಸ ಆಯೋಜಿಸಿದೆ.

ಮಲ್ಲೇಶ್ವರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯನ್ನು ಸಾರ್ವಜನಿಕ ದರ್ಶನಕ್ಕಾಗಿ ಕಿರಣ್ ಶಾಸ್ತ್ರಿಗಳು ವಿಶೇಷವಾಗಿ ರೂಪಿಸಿದ್ದಾರೆ.-ಪ್ರಜಾವಾಣಿ ಚಿತ್ರ
ಮಲ್ಲೇಶ್ವರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯನ್ನು ಸಾರ್ವಜನಿಕ ದರ್ಶನಕ್ಕಾಗಿ ಕಿರಣ್ ಶಾಸ್ತ್ರಿಗಳು ವಿಶೇಷವಾಗಿ ರೂಪಿಸಿದ್ದಾರೆ.-ಪ್ರಜಾವಾಣಿ ಚಿತ್ರ

ಅಹೋರಾತ್ರಿ ಕಾವ್ಯ ಗಾಯನ
ರಂಗಸಮುದ್ರ, ಕಾವ್ಯ ಮಂಡಲ ಮತ್ತು ಜನಸಂಸ್ಕೃತಿ ಪ್ರತಿಷ್ಠಾನ ಅಹೋರಾತ್ರಿ ಕಾವ್ಯ ಗಾಯನ ‘ಕಾವ್ಯ ಶಿವರಾತ್ರಿ’ ಕಾರ್ಯಕ್ರಮವನ್ನು ರಾಜರಾಜೇಶ್ವರಿ ನಗರದ ಟಿ.ಎನ್. ಬಾಲಕೃಷ್ಣ ಬಯಲು ರಂಗ ಮಂದಿರದಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹಮ್ಮಿಕೊಂಡಿದೆ. ದೊಡ್ಡಗವಿ ಬಸಪ್ಪ ಮತ್ತು ತಂಡದಿಂದ ಮಂಟೇಸ್ವಾಮಿ ಮತ್ತು ಮಲೆ ಮಾದೇಶ್ವರ ಮಹಾಕಾವ್ಯ ಗಾಯನ ನಡೆಯಲಿದೆ.

ಹಾಪ್‌ಕಾಮ್ಸ್‌ ಮಹಾಶಿವರಾತ್ರಿ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಣ್ಣು, ತರಕಾರಿ ಮಾರಾಟಕ್ಕಾಗಿ ‘ಶಿವರಾತ್ರಿ ಮೇಳ’ವನ್ನು ಆಯೋಜಿಸಿದೆ. ಕಲ್ಲಂಗಡಿ, ಸೇಬು, ಖರ್ಬೂಜ, ದ್ರಾಕ್ಷಿ, ಕಿತ್ತಳೆ, ಮೂಸಂಬಿ, ಬಾಳೆಹಣ್ಣು ಸೇರಿದಂತೆ ಎಲ್ಲ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಸಲುವಾಗಿ ಐದು ಮಳಿಗೆಗಳನ್ನು ತೆರೆಯಲಾಗಿದೆ.

ಶಿವ–ಪಾರ್ವತಿಗೆ ವಿಶೇಷ ಅಲಂಕಾರ
ಹನುಮಂತ ನಗರದ ಶೇಷ ಮಹಾಬಲಮುರಿ ಗಣಪತಿ ದೇವಸ್ಥಾನವು ಶಿವರಾತ್ರಿ ಪ್ರಯುಕ್ತ ಶಿವ–ಪಾರ್ವತಿ ಹಾಗೂ ಉಳಿದ ದೇವರಿಗೆ ವಿಶೇಷ ಅಲಂಕಾರವನ್ನು ಏರ್ಪಡಿಸಿದೆ. ದ್ರಾಕ್ಷಿ, ಮುತ್ತು, ಹಣ್ಣುಗಳು, ಗಂಟೆಗಳು, ಕಬ್ಬಿನಿಂದ ವಿಶೇಷ ಅಲಂಕಾರ ಮಾಡಿ, ಶಿವರಾತ್ರಿ ಆಚರಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಕೆ. ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT