ಬೆಂಗಳೂರು: ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾನಂದಾ (21) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ್ದ ಆರೋಪಿ ಕೃಷ್ಣಚಂದ್ ಶೇತಿಯನ್ನು (28) ಬಂಧಿಸಿದ್ದಾರೆ.
‘ಒಡಿಶಾದ ಕೃಷ್ಣಚಂದ್, ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಪಕ್ಕದ ಮನೆಯಲ್ಲಿ ವಾಸವಿದ್ದ ಮಹಾನಂದಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಂದಿದ್ದ. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಲಬುರಗಿಯ ಮಹಾನಂದಾ, ಸಹೋದರಿ ಜೊತೆ ವಾಸವಿದ್ದರು. ಇಬ್ಬರೂ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ.10ರಂದು ಮಹಾನಂದಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆ.11ರಂದು ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ, ನೆರೆಮನೆಯ ನಿವಾಸಿ ಕೃಷ್ಣಚಂದ್‌ನೇ ಆರೋಪಿ ಎಂಬುದು ತಿಳಿಯಿತು’ ಎಂದು ವಿವರಿಸಿದರು.
‘ಕೃಷ್ಣಚಂದ್, ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿ ಜೊತೆ ನೆಲೆಸಿದ್ದ. ಪತ್ನಿ ಸಹ ಪೆಟ್ರೋಲ್ ಬಂಕ್‌ನಲ್ಲಿ ಮಹಾನಂದಾ ಜೊತೆ ಕೆಲಸ ಮಾಡುತ್ತಿದ್ದರು. ಅಕ್ಕ–ಪಕ್ಕದ ಮನೆಯವರಾಗಿದ್ದರಿಂದ ಎಲ್ಲರಿಗೂ ಪರಿಚಯವಿತ್ತು’ ಎಂದು ಹೇಳಿದರು.
ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ: ‘ಆ.10ರಂದು ಕೆಲಸಕ್ಕೆ ರಜೆ ಹಾಕಿದ್ದ ಮಹಾನಂದಾ ಮನೆಯಲ್ಲಿದ್ದರು. ಸಹೋದರಿ ಕೆಲಸಕ್ಕೆ ಹೋಗಿದ್ದರು. ಆರೋಪಿಯ ಪತ್ನಿ ಸಹ ಕೆಲಸಕ್ಕೆ ತೆರಳಿದ್ದರು. ಆರೋಪಿ ಮಾತ್ರ ಮನೆಯಲ್ಲಿದ್ದ’ ಎಂದು ಪೊಲೀಸರು ತಿಳಿಸಿದರು.
‘ಸಂಜೆ ಯುವತಿಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಿಡಿಸಿಕೊಳ್ಳಲು ಯತ್ನಿಸಿದ್ದ ಮಹಾನಂದಾ, ರಕ್ಷಣೆಗಾಗಿ ಕೂಗಾಡಿದ್ದರು. ಆಗ ಮೂಗು ಹಾಗೂ ಬಾಯಿ ಅದುಮಿ ಹಿಡಿದುಕೊಂಡಿದ್ದ. ನಂತರ, ಕುತ್ತು ಹಿಸುಕಿ ಕೊಂದಿದ್ದ’ ಎಂದು ಪೊಲೀಸರು ತಿಳಿಸಿದರು.
‘ಮಹಾನಂದಾ ಮೃತದೇಹಕ್ಕೆ ಬೆಡ್‌ಶೀಟ್ ಸುತ್ತಿದ್ದ ಆರೋಪಿ, ಅದನ್ನು ನೀರಿನ ಡ್ರಮ್‌ನೊಳಗೆ ಇರಿಸಿ ಮುಚ್ಚಳ ಮುಚ್ಚಿದ್ದ. ತಡರಾತ್ರಿ ಕೆಲಸ ಮುಗಿಸಿ ಪತ್ನಿ ಮನೆಗೆ ಬಂದಾಗಲೂ ನೀರಿನ ಡ್ರಮ್‌ನಲ್ಲಿ ಮೃತದೇಹವಿತ್ತು’ ಎಂದು ಹೇಳಿದರು.
‘ತನಿಖೆಯ ಸಂದರ್ಭದಲ್ಲಿ ಪತಿ ಕೃಷ್ಣಚಂದ್‌ನೇ ಮಹಾನಂದಾ ಕೊಲೆ ಮಾಡಿರುವುದಾಗಿ ಆತನ ಪತ್ನಿ ಬಾಯ್ಬಿಟ್ಟಿದ್ದರು. ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.