ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರ್‌ ಜೈನ್‌ ಆಸ್ಪತ್ರೆ: ಬೆನ್ನುಹುರಿ ಸಮಸ್ಯೆ, ಗುಣವಾದ ಮಕ್ಕಳ ಸಂತಸ

ಈ ವರ್ಷ 40ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Published 16 ಅಕ್ಟೋಬರ್ 2023, 16:23 IST
Last Updated 16 ಅಕ್ಟೋಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರಂತೆಯೇ ಆಟವಾಡುತ್ತಿದ್ದ, ಶಾಲೆಗೂ ತೆರಳುತ್ತಿದ್ದ ವಿದ್ಯಾರ್ಥಿನಿಗೆ ದಿಢೀರ್‌ ಬೆನ್ನು ಮೂಳೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆಕೆ ಹಾಗೂ ಇಡೀ ಕುಟುಂಬವೇ ಆಘಾತಕ್ಕೆ ಒಳಗಾಯಿತು. ನೋವಿಗೆ ಕಾರಣ ತಿಳಿಯಲಿಲ್ಲ. ದಿಕ್ಕು ತೋಚದೇ ಹಲವು ಕ್ಲಿನಿಕ್‌ಗಳಿಗೆ ಎಡತಾಕಿದ್ದಾಯಿತು. ಕೊನೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಅದು ಬೆನ್ನುಹುರಿ ಸಮಸ್ಯೆ ಎಂಬುದು ಖಚಿತವಾಯಿತು. ಆದರೆ, ಅಲ್ಲಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಇರಲಿಲ್ಲ.

ಅಲ್ಲಿನ ವೈದ್ಯರ ಸೂಚನೆಯಂತೆ ಬೆಂಗಳೂರಿನ ವಸಂತನಗರದಲ್ಲಿರುವ ಮಹಾವೀರ್‌ ಜೈನ್‌ ಆಸ್ಪತ್ರೆಗೆ ಕರೆತಂದು ಯಶಸ್ವಿಯಾಗಿ ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಈಗ ಆ ವಿದ್ಯಾರ್ಥಿನಿ ಎಲ್ಲರಂತೆ ಲವಲವಿಕೆಯಿಂದ ಓಡಾಡುತ್ತಿದ್ದಾಳೆ. ಶಾಲೆಗೂ ಹೋಗುತ್ತಿದ್ಧಾಳೆ. ಇದು ಚಾಮರಾಜನಗರ ಜಿಲ್ಲೆಯ ಹನೂರು ಸಮೀಪದ ಹಳ್ಳಿಯೊಂದರ ವಿದ್ಯಾರ್ಥಿನಿಯ ಕಥೆ.

ಹನೂರಿನ 8 ವರ್ಷ ಹಾಗೂ 6 ವರ್ಷದ ಇಬ್ಬರು ಅಕ್ಕತಂಗಿಯರೂ ಬೆನ್ನುಹುರಿ ಸಮಸ್ಯೆಗೆ ಒಳಗಾಗಿದ್ದರು. ಆ ಇಬ್ಬರು ಮಕ್ಕಳಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಗುಣವಾಗಿದ್ದಾರೆ.

‘ಬೆನ್ನು ಮೂಳೆ ನೋವಿನಿಂದ ನಡೆದಾಡಲು ಸಾಧ್ಯವಿರಲಿಲ್ಲ. ಶಾಲೆಗೂ ತೆರಳಲು ಆಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿದ ಮೇಲೆ ಮಕ್ಕಳ ಬೆಳವಣಿಗೆ ಆಗುತ್ತಿದೆ. ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿದರು. ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದಗಳು’ ಎಂದು ಆ ಹೆಣ್ಣು ಮಕ್ಕಳ ತಾಯಿ ಹೇಳಿದರು.

ನಗರದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ವಿಶ್ವ ಬೆನ್ನುಹುರಿ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣವಾದ ಮಕ್ಕಳು ಹಾಗೂ ಪೋಷಕರು ಸಂತಸ ಹಂಚಿಕೊಂಡ ಪರಿ ಇದು. ಮಕ್ಕಳಲ್ಲಿನ ಬದಲಾವಣೆ ಕಂಡು ಪೋಷಕರೂ ಸಂಭ್ರಮಿಸುತ್ತಿದ್ದಾರೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಕಳೆದ ಕೆಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ 750 ಮಕ್ಕಳಿಗೆ ಯಶಸ್ವಿಯಾಗಿ ಬೆನ್ನುಹುರಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸ್ಕೋಲಿಯೋಸಿಸ್‌ನಿಂದ ಬಳಲುತ್ತಿದ್ದವರು ಈಗ ಹೊಸ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಬೆನ್ನುಹುರಿ ಸಮಸ್ಯೆಗೆ ತುತ್ತಾದರೆ ಮಕ್ಕಳು ಬೆಳವಣಿಗೆ ಆಗುವುದಿಲ್ಲ. ಜೀವಕ್ಕೂ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಹಾಗೂ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಅಭಿನಂದನೀಯ ಕಾರ್ಯ’ ಎಂದು ಹೇಳಿದರು.

‘ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಸ್ಕೋಲಿಯೋಸಿಸ್‌ ಸೇರ್ಪಡೆ ಮಾಡಿದರೆ ಬಡ ಕುಟುಂಬದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ವೈದ್ಯರು ಮನವಿ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬೆನ್ನುಹುರಿ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಬಿ.ಎಚ್‌.ಮಹೇಶ್‌ ಮಾತನಾಡಿ, ‘2010ರಿಂದ ಆರಂಭವಾದ ವಿಭಾಗದಲ್ಲಿ ಇದುವರೆಗೂ ಒಟ್ಟು 750 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದರಲ್ಲಿ 300 ಮಕ್ಕಳಿಗೆ ಆರ್ಥಿಕ ನೆರವು ಸಿಕ್ಕಿದ್ದು, ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.

‘ಜನಿಸಿದ ಮಗುವಿಗೆ ಅಥವಾ ಮಗುವಿಗೆ 10 ವರ್ಷವಿರುವಾಗ ಅಥವಾ ಪೊಲೀಯೊ ಪೀಡಿತ ಮಕ್ಕಳಲ್ಲಿ ಈ ಬೆನ್ನುಹುರಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಒಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ಗುಣ ಪಡಿಸಿದರೆ ಮುಂದೆ ಸಮಸ್ಯೆಯಾಗುವುದಿಲ್ಲ. ಲಕ್ಷದಲ್ಲಿ ಒಂದು ಮಗುವಿಗೆ ಬೆನ್ನುಹುರಿ ಸಮಸ್ಯೆ ಕಾಡಲಿದೆ. ಇಲ್ಲಿ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿದ್ದಾರೆ’ ಎಂದರು.

ಭಗವಾನ್‌ ಮಹಾವೀರ್‌ ಜೈನ್‌ ಗ್ರೂಪ್‌ ಆಫ್‌ ಹಾಸ್ಟಿಟಲ್‌ನ ಅಧ್ಯಕ್ಷ ಕಿಶನ್‌ ಲಾಲ್‌ ಕೊಠಾರಿ, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ರವೀಂದ್ರನಾಥ್‌ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT