ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್‌ ಆಫ್‌ ಏಷ್ಯಾ: ಮಧ್ಯಂತರ ಆದೇಶ ವಿಸ್ತರಣೆ

Published 2 ಜನವರಿ 2024, 23:32 IST
Last Updated 2 ಜನವರಿ 2024, 23:32 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಲ್‌ ಆಫ್‌ ಏಷ್ಯಾದ ಬಳಿ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಸಮಸ್ಯೆಯನ್ನು ಸೌಹಾರ್ದಯುತ ರೀತಿಯಲ್ಲಿ ಬಗೆಹರಿಸಲು ನಗರ ಪೊಲೀಸ್‌ ಆಯುಕ್ತರ ಜೊತೆ ಎರಡು ಬಾರಿ ಚರ್ಚೆ ನಡೆಸಲಾಗಿದೆ‘ ಎಂದು ಫಿನಿಕ್ಸ್‌ ಮಾಲ್‌ ಆಫ್‌ ಏಷ್ಯಾ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

‘ಮಾಲ್‌ ಆಫ್‌ ಏಷ್ಯಾಗೆ ಸಾರ್ವಜನಿಕರ ಪ್ರವೇಶಕ್ಕೆ 2023ರ ಡಿಸೆಂಬರ್ 31ರಿಂದ 2024ರ ಜನವರಿ 15ರವರೆಗೆ ಅವಕಾಶ ಕಲ್ಪಿಸಬಾರದು‘ ಎಂದು ನಗರ ಪೊಲೀಸ್‌ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ, ‘ಮಾಲ್‌ ಆಫ್‌ ಏಷ್ಯಾ’ದ ಪ್ರತಿನಿಧಿಯಾಗಿ ‘ಸ್ಪಾರ್ಕಲ್‌ ಒನ್‌ ಮಾಲ್‌ ಡೆವಲಪರ್ಸ್‌ ಲಿಮಿಟೆಡ್‌‘ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕಿಲ ಧ್ಯಾನ್‌ ಚಿನ್ನಪ್ಪ, ‘ಅರ್ಜಿದಾರರು ನಗರ ಪೊಲೀಸ್‌ ಆಯಕ್ತರೊಂದಿಗೆ ಎರಡು ಬಾರಿ ಸಭೆ ನಡೆಸಿ ಸಮಾಲೋಚಿಸಿದ್ದಾರೆ. ಮಾಲ್‌ ಆಫ್‌ ಏಷ್ಯಾದ ಬಳಿ ಸಂಚಾರ ದಟ್ಟಣೆ, ವಾಹನ ನಿಲುಗಡೆ ಸೇರಿದಂತೆ ಇತರೆ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ನಗರ ಪೊಲೀಸ್‌ ಆಯುಕ್ತರು ಮಂಗಳವಾರ (ಜ.2) ಮಾಲ್‌ಗೆ ಭೇಟಿ ನೀಡಿದ್ದಾರೆ‘ ಎಂದು ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 5ಕ್ಕೆ ಮುಂದೂಡಿತು. ಅಂತೆಯೇ, ‘ಮುಂದಿನ ಆದೇಶದವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು‘ ಎಂದು ನಗರ ಪೊಲೀಸ್‌ ಇಲಾಖೆಗೆ ಸೂಚಿಸಿ 2023ರ ಡಿಸೆಂಬರ್ 31ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಇದೇ 5ರವರೆಗೆ ವಿಸ್ತರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT