ಬೆಂಗಳೂರು: ವಿಧಾನಸೌಧದ ಎದುರು ಬುಧವಾರ ಮಧ್ಯಾಹ್ನ ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ ಹಾಕಿ ದುರ್ವತನೆ ತೋರಿದ್ದ ಆರೋಪದಡಿ ಚಿತ್ರದುರ್ಗದ ಚಳ್ಳಕೆರೆಯ ನಿವಾಸಿ ಪೃಥ್ವಿರಾಜ್(27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಬೆಂಕಿ ಹಾಕಿ ದುರ್ವತನೆ ತೋರಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು, ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಡಿಪ್ಲೊಮಾ ಪದವಿ ಪಡೆದಿರುವ ಪೃಥ್ವಿರಾಜ್, ಯಶವಂತಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. 15 ದಿನಗಳ ಹಿಂದೆ ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳಿದ್ದ. ಮೂರು ದಿನ ಕಳೆದರೂ ಚಳ್ಳಕೆರೆಯಲ್ಲಿದ್ದ ತಾಯಿಗೆ ಕರೆ ಮಾಡಿರಲಿಲ್ಲ. ತಾಯಿ ಕರೆ ಮಾಡಿದರೂ ಮೊಬೈಲ್ ‘ಸ್ವಿಚ್ಢ್ ಆಫ್’ ಎಂದು ಬರುತ್ತಿತ್ತು. ಇದರಿಂದ ಗಾಬರಿಗೊಂಡಿದ್ದ ತಾಯಿ, ಚಳ್ಳಕೆರೆ ಪೊಲೀಸ್ ಠಾಣೆಗೆ ತೆರಳಿ ಮಗನನ್ನು ಪತ್ತೆ ಮಾಡಿಕೊಡುವಂತೆ ಕೋರಿದ್ದರು. ಅಲ್ಲದೇ, ನಾಪತ್ತೆ ಪ್ರಕರಣ ದಾಖಲಿಸುವಂತೆಯೂ ಕೋರಿದ್ದರು. ದೂರು ಸ್ವೀಕರಿಸದೇ ಪೊಲೀಸರು ವಾಪಸ್ ಕಳುಹಿಸಿದ್ದರು. ಜತೆಗೆ ನಿಂದನೆ ಮಾಡಿದ್ದರು ಎನ್ನಲಾಗಿದೆ.
ವಾರದ ಬಳಿಕ ಪೃಥ್ವಿರಾಜ್ ಚಳ್ಳಕೆರೆಯ ಮನೆಗೆ ಬಂದಿದ್ದ. ಆಗ, ‘ಪೊಲೀಸರು ದೂರು ಸ್ವೀಕರಿಸದೇ ನಿಂದಿಸಿ ಕಳುಹಿಸಿದ್ದರು’ ಎಂದು ತಾಯಿ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಪೃಥ್ವಿರಾಜ್, ತಾಯಿ ಜತೆಗೆ ಠಾಣೆಗೆ ತೆರಳಿ, ‘ನಾಪತ್ತೆ ದೂರು ಏಕೆ ಸ್ವೀಕರಿಸಿಲ್ಲ’ ಎಂದು ಪ್ರಶ್ನಿಸಿದ್ದ. ಆಗ ಪೊಲೀಸರು ಠಾಣೆ ಒಳಕ್ಕೆ ಕರೆದೊಯ್ದಿದ್ದರು. ಅಲ್ಲಿ ನಡೆದ ವಾಗ್ವಾದದ ವಿಡಿಯೊ ಸಹ ಮಾಡಿದ್ದ ಎಂದು ಮೂಲಗಳು ಹೇಳಿವೆ.
ಎಚ್ಚರಿಕೆ ನೀಡಿದ್ದ ಡಿವೈಎಸ್‌ಪಿ:
ಪೊಲೀಸರ ವರ್ತನೆಯಿಂದ ಬೇಸರವಾಗಿದೆ ಎಂದು ಹೇಳಿಕೊಂಡು ವಿಧಾನಸೌಧ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಕೆಲವು ಸಂಸ್ಥೆಗಳನ್ನು ಸ್ಫೋಟಿಸುವುದಾಗಿ ವಿಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಮತ್ತೆ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಆಗ ‘ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವೇ ಪಿಸ್ತೂಲ್ ತೆಗೆದು ಪಿಎಸ್‌ಐಗೆ ಗುಂಡು ಹಾರಿಸುತ್ತೇನೆಂದು ಬೆದರಿಕೆ ಒಡ್ಡಿದ್ದ’. ಪೃಥ್ವಿ ಹಾಗೂ ಅವರ ತಾಯಿಗೆ ಡಿವೈಎಸ್‌ಪಿಯೊಬ್ಬರು ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಯಶವಂತಪುರದಲ್ಲಿರುವ ಬಾಡಿಗೆ ಮನೆಗೆ ಬುಧವಾರ ಬಂದಿದ್ದ ಯುವಕ, ವಿಧಾನಸೌಧದ ಎದುರು ಬೈಕ್ ತಂದು ಬೆಂಕಿ ಹಾಕಿದ್ದಾನೆ. ‘ಪೊಲೀಸರ ವರ್ತನೆಯಿಂದ ಬೇಸತ್ತು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.