ಶನಿವಾರ, ಜುಲೈ 2, 2022
25 °C
‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌ ಹಾಸ್ಯ ಚಟಾಕಿ

ಹೆಂಡತಿಗಾಗಿ ಯೌವನ ಕಾಪಾಡಿಕೊಂಡಿರುವೆ: ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೆಂಡತಿಯನ್ನು ನೋಡಿದರೆ ವಯಸ್ಸಾಗಿದೆ ಎಂದು ಅನಿಸುವುದೇ ಇಲ್ಲ. ಆಕೆಗಾಗಿಯೇ ನಾನೂ ಯೌವನವನ್ನು ಕಾಪಾಡಿಕೊಂಡು ಬರುತ್ತಿದ್ದೇನೆ’ ಎಂದು ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌ ಹಾಸ್ಯ ಚಟಾಕಿ ಹಾರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಬದುಕಿನ ಹಲವು ನೆನಪುಗಳನ್ನು ಬಿಚ್ಚಿಟ್ಟರು.

ವಯಸ್ಸಿನ ಕುರಿತ ಪ್ರಶ್ನೆಗೆ, ‘ವಯಸ್ಸಾಯಿತೆಂದು ಯಾವತ್ತೂ ಅಂದುಕೊಂಡೇ ಇಲ್ಲ. ನನ್ನೊಳಗಿನ ಕಾವ್ಯ ಕನ್ನಿಕೆಯನ್ನು ಉಳಿಸಿಕೊಳ್ಳುವುದಕ್ಕಾದರೂ ಸದಾ ಕಾಲ ಯೌವ್ವನಸ್ಥನಾಗಿರಬೇಕು. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ನಗೆ ಬೀರಿದರು. 

‘ಬಾಲ್ಯದಿಂದಲೇ ಪ್ರತಿಭಾವಂತನಾಗಿದ್ದ ನನಗೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಇತ್ತು. ಏಕಾಂಗಿ ಸಾಹಸಗಳನ್ನು ಹೆಚ್ಚು ಮಾಡುತ್ತಿದ್ದೆ. ತಾಯಿಯ ತವರೂರು ಶಿಡ್ಲಘಟ್ಟದ ಚಿ.ಮಂಗಲದಲ್ಲಿದ್ದಾಗ ಕಾಗದದ ದೋಣಿ ಮಾಡಿ ಅದನ್ನು ಬಿಡಲು ಕೆರೆಗೆ ಹೋಗಿದ್ದೆ. ದೋಣಿ ಬಿಟ್ಟ ನಂತ ಅದರ ಹಿಂದೆಯೇ ಹೋಗಿ ನೀರಿನಲ್ಲಿ ಮುಳುಗಿದ್ದೆ. ಅದನ್ನು ನೋಡಿದವರೊಬ್ಬರು ನನ್ನ ಜೀವ ಉಳಿಸಿದ್ದರು’ ಎಂದು ಸ್ಮರಿಸಿದರು.

‘ಅಪ್ಪನನ್ನು ನೋಡಿ ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದೆ. ಶಾಲಾ ದಿನಗಳಲ್ಲಿ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದೆ. ಮನೆಯಲ್ಲಿ ಸಾಹಿತ್ಯದ ವಾತಾವರಣ ಇರಲಿಲ್ಲ. ಹೀಗಿದ್ದರೂ ಈ ಕ್ಷೇತ್ರದೆಡೆ ಹೇಗೆ ಹೊರಳಿದೆ ಎಂಬುದು ಗೊತ್ತಿಲ್ಲ. ಗ್ರಂಥಾಲಯದಿಂದ ಕಾದಂಬರಿಗಳನ್ನು ಎರವಲು ಪಡೆಯುತ್ತಿದ್ದ ಅಮ್ಮ, ಅವುಗಳನ್ನು ಮನೆಗೆ ತಂದು ಓದುತ್ತಿದ್ದರು. ಅವುಗಳನ್ನು ನಾನೂ ಓದುತ್ತಿದ್ದೆ’ ಎಂದರು. 

‘ಶಾಲಾ ದಿನಗಳಲ್ಲಿ ಮುಖ್ಯಶಿಕ್ಷಕರ ತರಗತಿಗೇ ‘ಚಕ್ಕರ್‌’ ಹೊಡೆದು ಸ್ನೇಹಿತರೊಂದಿಗೆ ಸಿನಿಮಾಗೆ ಹೋಗುತ್ತಿದ್ದೆ. ಅವರು ನಮ್ಮ ತಂದೆ ಬಳಿ ದೂರು ನೀಡುತ್ತಿದ್ದರು. ಹೇಗೋ ಅನುತ್ತೀರ್ಣನಾಗುತ್ತೇನೆ. ಫೋಟೊ ಸ್ಟುಡಿಯೊ ನೋಡಿಕೊಳ್ಳಲು ನಿಯೋಜಿಸಿದರಾಯಿತು ಎಂದು ಅಪ್ಪ ಭಾವಿಸಿದ್ದರು. ಆದರೆ ನಾನು ಸೆಂಟರ್‌ಗೆ ಎರಡನೇ ಸ್ಥಾನದೊಂದಿಗೆ ಪಾಸಾಗಿದ್ದೆ’ ಎಂದು ನೆನಪಿನ ಪುಟ ತಿರುವಿದರು. 

‘ಕಾಲೇಜಿನಲ್ಲಿದ್ದಾಗ ಪ್ರಕಾಶ್‌ ಎಂಬ ಆತ್ಮೀಯ ಗೆಳೆಯನಿದ್ದ. ಆತನಿಂದಾಗಿ ಪದ್ಯ ಬರೆಯಲು ಶುರುಮಾಡಿದ್ದೆ. ಬೆಂಗಳೂರಿಗೆ ಬಂದ ನಂತರ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಪರಿಚಯವಾಯಿತು. ಅವರು ಪದ್ಯಗಳನ್ನು ಮೆಚ್ಚಿದ್ದರು. ಲಂಕೇಶರನ್ನು ಪರಿಚಯ ಮಾಡಿಕೊಳ್ಳುವಂತೆಯೂ ತಿಳಿಸಿದ್ದರು. ಪಿ.ಲಂಕೇಶ್‌ ಹಾಗೂ ವೈ.ಎನ್‌.ಕೆ. ಅವರು ನನ್ನನ್ನು ಸಾಹಿತಿಯನ್ನಾಗಿ ರೂಪಿಸಿದರು’ ಎಂದು ತಿಳಿಸಿದರು.

‘ಸಾಹಿತ್ಯಯಾನದಲ್ಲಿ ನಾನು ಮತ್ತು ಎಚ್‌.ಎಸ್‌.ವೆಂಕಟೇಶಮೂರ್ತಿ ಜೊತೆ ಜೊತೆಯಾಗಿ ಹೆಜ್ಜೆ ಇಟ್ಟಿದ್ದೇವೆ. ಭಾವಗೀತೆ ಪಯಣದಲ್ಲೂ ಜೊತೆಗಿದ್ದೆವು. ಆಗ ನಮ್ಮನ್ನೆಲ್ಲಾ ಕ್ಯಾಸೆಟ್‌ ಕವಿಗಳು ಎಂದು ಮೂದಲಿಸುತ್ತಿದ್ದರು. ಕಾವ್ಯದಿಂದ ಭಾವಗೀತೆಗೆ ಬಂದಾಗಲೂ ನಮ್ಮತನ ಬಿಟ್ಟುಕೊಟ್ಟಿರಲಿಲ್ಲ. ಜನರ ಪ್ರೀತಿ ಧಾರಾಳವಾಗಿ ಸಿಕ್ಕಿದೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಮತ್ಯಾವುದೂ ಬೇಕಿಲ್ಲ. ಕೆಲ ಪ್ರಶಸ್ತಿಗಳಿಗಾಗಿ ಯುದ್ಧ ರಂಗದ ಹಾಗೆ ಜೀವನ ರಂಗದಲ್ಲೂ ನಮ್ಮ ಸರತಿಗಾಗಿ ಕಾಯಬೇಕು.  ಅಂತಹ ಪ್ರಶಸ್ತಿಗಳ ಬಗ್ಗೆ ನನಗೇನೂ ಆಸಕ್ತಿ ಇಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು