ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿ ವಿಲಾಸ: 200 ಸೋಂಕಿತರಿಗೆ ಹೆರಿಗೆ, ಮಗುವಿನೊಂದಿಗೆ ಸಂಭ್ರಮ

Last Updated 11 ಆಗಸ್ಟ್ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಕೊರೊನಾ ಸೋಂಕಿತ 200 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆಗಳನ್ನು ಮಾಡಿಸಿದ್ದಾರೆ.

ಕೋವಿಡ್ ನಡುವೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಅಲ್ಲಿನ ವೈದ್ಯರು ಹೆರಿಗೆಗಳನ್ನು ಮಾಡಿಸುತ್ತಿದ್ದು, ಮೇ 9ರಂದು ಕೊರೊನಾ ಸೋಂಕಿತ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದರು. ಜುಲೈ17ರ ವೇಳೆಗೆ ಕೋವಿಡ್‌ ಪೀಡಿತ 100 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿತ್ತು. ಮುಂದಿನ 24 ದಿನಗಳಲ್ಲಿ ಈ ಸಂಖ್ಯೆ 200ಕ್ಕೆ ಏರಿದೆ. ಸೋಮವಾರ ಸಂಜೆ 4.30ಕ್ಕೆ ಕೊರೊನಾ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಅಲ್ಲಿನ ವೈದ್ಯರು ಹಾಗೂ ಶುಶ್ರೂಷಕಿಯರು ಮಗುವನ್ನು ಎತ್ತಿಕೊಂಡು ಪರಸ್ಪರ ಶುಭಹಾರೈಸಿ, ಸಂಭ್ರಮಿಸಿದರು.

‘200ನೇ ಗರ್ಭಿಣಿಗೆ ಶಸ್ತ್ರಚಿಕಿತ್ಸೆನಡೆಸಿ ಮಗುವನ್ನು ಹೊರತೆಗೆಯಲಾಯಿತು. ಈ ಗರ್ಭಿಣಿಯರನ್ನು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ದಾಖಲಿಸಿಕೊಂಡು, ಆರೈಕೆ ಮಾಡಲಾಗುತ್ತಿದೆ. ಅವರಿಗೆ ಅಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. 200 ಹೆರಿಗೆಗಳ ಪೈಕಿ ಶೇ 60 ರಷ್ಟು ಶಸ್ತ್ರಚಿಕಿತ್ಸೆ ಮೂಲಕ ನಡೆದಿವೆ. ಪ್ರತಿನಿತ್ಯ 10ರಿಂದ 15 ಕೋವಿಡೇತರ ಗರ್ಭಿಣಿಯರಿಗೆ ಕೂಡ ಹೆರಿಗೆ ನಡೆಸಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಗೀತಾ ಶಿವಮೂರ್ತಿ ತಿಳಿಸಿದರು.

‘ಎಲ್ಲ ಗರ್ಭಿಯರಿಗೆ ಸೂಕ್ತ ತಪಾಸಣೆ ನಡೆಸಿ, ಆರೈಕೆ ಮಾಡುತ್ತಿದ್ದೇವೆ. ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ ಒಟ್ಟು 1,966 ಹೆರಿಗೆಗಳನ್ನು ಮಾಡಿಸಲಾಗಿದೆ.ಕೋವಿಡ್ ಸಂದರ್ಭದಲ್ಲಿ ಎಲ್ಲ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಕೂಡ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲು ಸಾಧ್ಯವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT