ಶನಿವಾರ, ಡಿಸೆಂಬರ್ 4, 2021
20 °C
ಎಲ್‌ಇಡಿ ಬೀದಿದೀಪ ಯೋಜನೆ ಗುತ್ತಿಗೆಯಲ್ಲಿ ಅಕ್ರಮದ ಆರೋಪ

ಟೆಂಡರ್‌ ರದ್ಧತಿಗೆ ಆಗ್ರಹಿಸಿ ಮೇಯರ್‌ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕೊ) ನೀಡಿರುವ ಗುತ್ತಿಗೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸರ್ಕಾರಿ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯಡಿ ನಗರದಲ್ಲಿ 4.85 ಲಕ್ಷ ಸಾಂಪ್ರದಾಯಿಕ ಬೀದಿದೀಪಗಳನ್ನು ಬದಲಿಸಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಈ ಒಕ್ಕೂಟಕ್ಕೆ ಗುತ್ತಿಗೆ ನೀಡಲಾಗಿದೆ. ಹತ್ತು ವರ್ಷಗಳ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನೂ ವಹಿಸಲಾಗಿದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಮೇಯರ್‌ ಸೆ.2ರಂದು ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

‘ಶಾಪೂರ್ಜಿ ಪಲ್ಲೋಂಜಿ ಕಂಪನಿ ಹೂಡಿಕೆ ಮಾಡುತ್ತಿದ್ದು, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಹಾಗೂ ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ ಕಾಮಗಾರಿ ಅನುಷ್ಠಾನ ಮಾಡಬೇಕಿದೆ. ಆದರೆ, ಕಾಮಗಾರಿಯ ಕಾರ್ಯಾದೇಶ ನೀಡಿ 15 ತಿಂಗಳು ಕಳೆದರೂ ಈ ಕಂಪನಿಗಳು ಒಪ್ಪಿಗೆ ಪತ್ರದ (ಲೆಟರ್‌ ಆಫ್‌ ಅಕ್ಸೆಪ್ಟೆನ್ಸ್‌) ಷರತ್ತುಗಳನ್ನು ಪೂರ್ಣಗೊಳಿಸಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಮೇಯರ್‌ ದೂರಿದ್ದಾರೆ.

‘ನಿಯಮಗಳ ಪ್ರಕಾರ, ಎಲ್‌ಇಡಿ ದೀಪಗಳಿಂದ ಉಳಿತಾಯವಾಗುವ ವಿದ್ಯುತ್‌ ಶುಲ್ಕದ ಮೊತ್ತದಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಗುತ್ತಿಗೆದಾರರು ಶೇ 85.50ರಷ್ಟು ವಿದ್ಯುತ್‌ ಉಳಿತಾಯವನ್ನು ಖಾತರಿಪಡಿಸುವ ದಾಖಲೆ ಸಲ್ಲಿಸಬೇಕಿತ್ತು. ಆದರೆ, ಈ ಒಕ್ಕೂಟವು ಜೈಪುರ ಪಾಲಿಕೆಯಿಂದ ಪಡೆದಿರುವ ಶೇ 80.76ರಷ್ಟು ವಿದ್ಯುತ್‌ ಉಳಿತಾಯದ ದಾಖಲೆಯನ್ನು ಸಲ್ಲಿಸಿತ್ತು. ವಿದ್ಯುತ್‌ ಉಳಿತಾಯದ ಖಾತರಿ ಇಲ್ಲದೇ ಟೆಂಡರ್‌ ಅನುಮೋದಿಸಲಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಭಾರಿ ಪ್ರಮಾಣದಲ್ಲಿ ಎಲ್‌ಇಡಿ ದೀಪಗಳನ್ನು ಉತ್ಪಾದಿಸುವ ಘಟಕದ ಬಗ್ಗೆಯೂ ಗುತ್ತಿಗೆದಾರರು ಸರಿಯಾದ ಮಾಹಿತಿ ನೀಡಿಲ್ಲ. ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಯನ್ನೂ ನಡೆಸಿಲ್ಲ. ಗುತ್ತಿಗೆದಾರರ ಒಕ್ಕೂಟದ ಪಟ್ಟಿಯಲ್ಲಿ ಇಲ್ಲದ ಸೀಮನ್ಸ್‌ ಕಂಪನಿಯ ಮೂಲಕ ಈಗ ಅನಧಿಕೃತವಾಗಿ ಸಮೀಕ್ಷೆ ನಡೆಸುತ್ತಿರುವುದು ಕಂಡುಬಂದಿದೆ. ಹೈಕೋರ್ಟ್‌ ನೀಡಿದ ಆದೇಶದಂತೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ವಿಷಯವನ್ನು ಮಂಡಿಸದೇ ಟೆಂಡರ್‌ ಅಂತಿಮಗೊಳಿಸಲಾಗಿದೆ’ ಎಂದೂ ಮೇಯರ್‌ ಆರೋಪಿಸಿದ್ದಾರೆ.

‘ಪಾಲಿಕೆಯು ವಿವಿಧ ಯೋಜನೆಗಳ ಅಡಿಯಲ್ಲಿ ಈಗಾಗಲೇ ನಗರದ ಹಲವು ರಸ್ತೆಗಳಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಿದೆ. ಈಗ ಪಿಪಿಪಿ ಆಧಾರದ ಎಸ್ಕೊ ಒಕ್ಕೂಟವು ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಜನರು ಮೂಲಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಗುತ್ತಿಗೆಯನ್ನು ರದ್ದುಪಡಿಸಿ, ಹಂತ ಹಂತವಾಗಿ ಎಲ್‌ಇಡಿ ಬೀದಿದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು