ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳದಲ್ಲಿ ಔಷಧ ವನ: ಆರೋಗ್ಯಕ್ಕೆ ವರದಾನ

‘ಕೃಷಿ ಮೇಳ’ದಲ್ಲಿ ಜನರಿಗೆ ಕುತೂಹಲ ಮೂಡಿಸಿದ ಅಪರೂಪದ ಸಸಿಗಳು
Last Updated 5 ನವೆಂಬರ್ 2022, 20:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿವಿಯ ತಜ್ಞರು ಅಭಿವೃದ್ಧಿ ಪಡಿಸಿರುವ ಔಷಧೀಯ ಸಸ್ಯಗಳೂ ಸೇರಿ ಪಶ್ಚಿಮಘಟ್ಟ, ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಅಪರೂಪವಾಗಿ ಲಭಿಸುವ ಔಷಧೀಯ ಸಸ್ಯಗಳು ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿವೆ.

ಮೇಳದ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ರೈತರು ಹಾಗೂ ವಯಸ್ಕರರು ಈ ವನವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ವನದಲ್ಲಿ 150 ಔಷಧ ಸಸ್ಯಗಳು ಹಾಗೂ 100 ಸುಗಂದ ದ್ರವ್ಯ ಸಸ್ಯಗಳು ಸುವಾಸನೆ ಬೀರುತ್ತಿವೆ. ಹಲವು ಔಷಧೀಯ ಸಸ್ಯಗಳು ರೋಗಕ್ಕೆ ರಾಮಬಾಣ ಎನಿಸಿವೆ. ಅವುಗಳು ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಮನೆಯ ಎದುರು ಅಥವಾ ಚಾವಣಿಯಲ್ಲಿ ಹೂವಿನ ಕುಂಡಗಳಲ್ಲಿಯೇ ಔಷಧೀಯ ಸಸ್ಯ ಬೆಳೆಸಬಹುದು. ಪ್ರತಿನಿತ್ಯ ಇವುಗಳ ಎಲೆ ಸೇವಿಸಿದರೆ ಆರೋಗ್ಯವಾಗಿ ಇರಲು ಸಾಧ್ಯ. ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ತಜ್ಞರು ಹೇಳಿದರು.

ಸಕ್ಕರೆ ಕಾಯಿಲೆ ನಿಯಂತ್ರಿಸುವ, ರಕ್ತಸ್ರಾವ, ಜ್ವರ ನಿವಾರಕ, ಭೇದಿ ನಿಯಂತ್ರಣ, ಸೊಳ್ಳೆ ನಿರೋಧಕ, ಮೂತ್ರಕೋಶದ ಕಲ್ಲು, ಮೂಲವ್ಯಾಧಿ, ಮಲಬದ್ಧತೆ, ಹೊಟ್ಟೆ ನೋವು, ರಕ್ತದ ಒತ್ತಡ ನಿಯಂತ್ರಣ, ನಿದ್ರಾಹೀನತೆ, ನಿಶ್ಶಕ್ತಿ, ನಪುಂಸಕತೆ, ಜ್ವರ, ಜಂತುನಾಶಕ, ಕೆಮ್ಮು... ಹೀಗೆ ಹಲವು ಕಾಯಿಲೆ ನಿಯಂತ್ರಿಸುವ ಸಾಮರ್ಥ್ಯದ ಔಷಧದ ಗಿಡಗಳಿವೆ.

‘ಎರಡು ವರ್ಷಗಳ ಹಿಂದೆ ಸಕ್ಕರೆ ಗಿಡದ ಮತ್ತೊಂದು ತಳಿಯನ್ನು ಕೃಷಿ ವಿವಿ ತಜ್ಞರೇ ಅಭಿವೃದ್ಧಿ ಪಡಿಸಿದ್ದರು. ಮಧುಮೇಹ ರೋಗಗಳಿಗೆ ಇದು ವರದಾನ. ಇದರ ಎಲೆ ಅಥವಾ ಪುಡಿ ಸೇವಿಸಬಹುದು. ಈ ಎಲೆಯಲ್ಲಿ ಸಕ್ಕರೆಯಂತೆಯೇ ಸಿಹಿ ಅಂಶವಿದೆ. ಅಡ್ಡ ಪರಿಣಾಮ ಇಲ್ಲ. ಮಧುಮೇಹ ರೋಗಿಗಳಿಗೆ ಸಿಹಿ ಬೇಕು ಎನಿಸಿದಾಗ ಈ ಎಲೆ ಸೇವಿಸಿದರೆ ಸಾಕು. ಸಕ್ಕರೆ ಸೇವಿಸಿದ ಸಂತೃಪ್ತಿ ಸಿಗಲಿದೆ’ ಎಂದು ಕೃಷಿ ವಿ.ವಿಯ ತೋಟಗಾರಿಕೆ ವಿಭಾಗದ ತಜ್ಞ ಡಾ.ಕೆ.ಎನ್‌. ಶ್ರೀನಿವಾಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಕ್ಕರೆ ಗಿಡದ ಎಲೆ ಸೇವಿಸಿದರೆ ಸಕ್ಕರೆ ಕಾಯಿಲೆ, ಜೀರ್ಣಕ್ರಿಯೆ, ಚರ್ಮ ಆರೈಕೆ, ಬಾಯಿಹುಣ್ಣು ನಿಯಂತ್ರಿಸಬಹುದು. ದೊಡ್ಡಪತ್ರೆಯಿಂದ ಅಜೀರ್ಣ, ಕಾಲರಾ ಹಾಗೂ ಆಸ್ತಮಾ, ಹಿರೇಮದ್ದಿನ ಗಿಡದಿಂದ ನಿಶ್ಶಕ್ತಿ, ನಿದ್ರಾಹೀನತೆ, ಬಿಳಿಚಿತ್ರಮೂಲದ ಎಲೆ ಸೇವನೆಯಿಂದ ಚರ್ಮರೋಗ, ಅತಿಸಾರ ನಿಯಂತ್ರಣ ಸಾಧ್ಯ ಆಗಲಿದೆ. ಪೊದೆ ಕಾಳುಮೆಣಸನ್ನು ಅಡುಗೆಯಲ್ಲಿ ಬಳಸಬಹುದು. ಇದರಿಂದ ಕೆಮ್ಮು, ಜ್ವರ ನಿಯಂತ್ರಣಕ್ಕೆ ಬರುತ್ತದೆ. ರಂಗುಮಾಲೆ, ಚಿನ್ನಿಮರ, ಆಟಿ ಸೊಪ್ಪು, ನೀಲಿಗಿಡ... ಹೀಗೆ ನಾನಾ ರೀತಿಯ
ಗಿಡಗಳಿವೆ.

ಸುಗಂಧ ದ್ರವ್ಯದ ಸಸ್ಯಗಳು: ‘ಥೈಮ್‌’ನಿಂದ ಆಹಾರದಲ್ಲಿ ಪರಿಮಳ, ‘ಸೇಜ್‌ ಸಸಿ’ಯಿಂದ ಸಲಾಡ್‌, ಆಹಾರ ಪದಾರ್ಥಗಳು, ಸುಗಂಧ ದ್ರವ್ಯ, ಕಾಂತಿವರ್ಧಕ, ‘ಪನ್ನೀರು ಸೊಪ್ಪಿ’ನಿಂದ ಸೋಪು, ‘ರೋಸ್‌ ಮೇರಿ’ಯನ್ನು ಖಾದ್ಯ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಿದ್ದು, ಮೇಳದಲ್ಲಿ ನೋಡಗರ ಕುತೂಹಲ ಹೆಚ್ಚಿಸುತ್ತಿವೆ. ಸಿಟ್ರೊನೆಲ್ಲಾ, ಪಾಮರೋಸಾ, ಸ್ಪ್ಯಾನಿಷ್‌ ಪುದೀನ, ಬರ್ಗಾಮಾಟ್‌ ಪುದೀನ ವನದಲ್ಲಿ ಕಂಪು
ಬೀರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT