ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರವರ್ತುಲ ರಸ್ತೆ ಸಮಸ್ಯೆ ಅರಿಯಲು ಇದೇ 14ರಂದು ಸಭೆ: ಸಚಿವ ಅಶ್ವತ್ಥನಾರಾಯಣ

Last Updated 3 ನವೆಂಬರ್ 2022, 12:39 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಹೊರವರ್ತುಲ ರಸ್ತೆ ಪ್ರದೇಶದಲ್ಲಿ ಕಂಪನಿಗಳು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಇದೇ 14ರಂದು ಆ ಪ್ರದೇಶದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ವೀಕ್ಷಣೆ ನಡೆಸಿ, ಉದ್ಯಮಿಗಳು ಮತ್ತು ಜನಸಾಮಾನ್ಯರ ಜತೆ ಸಭೆ ನಡೆಸಲಿದ್ದಾರೆ’ ಎಂದು ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಹೊರವರ್ತುಲ ರಸ್ತೆಯ ಕಂಪನಿಗಳ ಒಕ್ಕೂಟ (ಓರ್‍ಕಾ) ಮತ್ತು ಇತರ ಕೆಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಗರದ ಮೂಲಸೌಲಭ್ಯ ಸಮಸ್ಯೆ ನಿವಾರಣೆ ಕುರಿತು ವಿಧಾನಸೌಧದಲ್ಲಿ ಗುರುವಾರ ಸಭೆ ನಡೆಸಿದರು. ಈ ಪ್ರದೇಶದ ಸಮಸ್ಯೆಗಳ ನಿವಾರಣೆಗೆ ಪ್ರತಿ ತಿಂಗಳೂ ಸಭೆ ನಡೆಸಲಾಗುವುದು ಎನ್ನುವ ಸರ್ಕಾರದ ತೀರ್ಮಾನದಂತೆ ಈ ಸಭೆ ಏರ್ಪಡಿಸಲಾಗಿತ್ತು.

ನಂತರ ಮಾತನಾಡಿದ ಸಚಿವರು, ‘ಹೊರವರ್ತುಲ ರಸ್ತೆಯ 17 ಕಿ.ಮೀ. ಪ್ರದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಸರ್ಕಾರದ ಗಮನ ಸೆಳೆದಿದ್ದಾರೆ. ಇಲ್ಲಿ ಸುಗಮ ಸಂಚಾರ, ಒಳಚರಂಡಿ, ಒತ್ತುವರಿ, ಮೆಟ್ರೊ ಕಾಮಗಾರಿ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುವುದು. ಹಾಗೆಯೇ ನಗರದಲ್ಲಿರುವ ಸರ್ವೀಸ್‌ ರಸ್ತೆಗಳನ್ನು ಕೂಡ ಮತ್ತಷ್ಟು ಸುಧಾರಿಸಲಾಗುವುದು’ ಎಂದರು.

‘ಬೆಂಗಳೂರಿನಲ್ಲಿ ಈ ಬಾರಿ 50 ವರ್ಷಗಳಲ್ಲೇ ಕಂಡುಕೇಳರಿಯದಂಥ ಮಳೆ ಬಂದಿದೆ. ಇದರಿಂದ ಕೆಲವು ಸಮಸ್ಯೆಗಳಾಗಿರುವುದು ನಿಜ. ಇದರ ಬಗ್ಗೆ ನಾವು ಹೆಚ್ಚು ಮುಕ್ತವಾಗಿ ಚರ್ಚಿಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಸಂಚಾರ ನಿಯಮಗಳು, ಪಾರ್ಕಿಂಗ್‌, ಸಮೂಹ ಸಾರಿಗೆ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ನಾವು ಶಾಲಾ ಹಂತದಿಂದಲೇ ಜಾಗೃತಿ ಮೂಡಿಸಬೇಕು. ಇದರ ಜತೆಗೆ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಹೊರವರ್ತುಲ ರಸ್ತೆ ಪ್ರದೇಶದ ಮೂಲಸೌಲಭ್ಯ ಸುಧಾರಣೆಗೆ ಹೇಗೆ ವಿನಿಯೋಗಿಸಬಹುದು ಎನ್ನುವ ಬಗ್ಗೆ ತೀರ್ಮಾನಕ್ಕೆ ಬರಬೇಕು. ಅಂತಿಮವಾಗಿ ಜನರ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ, ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌, ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್‌. ಪ್ರಹ್ಲಾದ್‌, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ರವಿಕಾಂತೇಗೌಡ ಇದ್ದರು.

ಉದ್ಯಮಿಗಳ ಪರವಾಗಿ ನಾಸ್ಕಾಂ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮ, ಏಬಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್‌ ಚಂದನ್, ಗೋಲ್ಡ್‌ಮನ್‌ ಸ್ಯಾಕ್ಸ್‌ನ ರವಿಕೃಷ್ಣನ್‌, ವಿಎಂ ವೇರ್‍ ನ ರಾಮಕುಮಾರ್ ನಾರಾಯಣನ್‌, ಓರ್‍ಕಾ ಸಂಘಟನೆಯ ಪ್ರತಿನಿಧಿಗಳಾದ ಮಾನಸ್‌ ದಾಸ್‌, ಅರ್ಚನಾ ತಾಯಡೆ, ಅರವಿಂದ್‌ ಅಯ್ಯಾಸ್ವಾಮಿ, ನಿಧಿ ಪ್ರತಾಪನೇನಿ, ಕೆ ಎಂ ಮೋಹನ್‌, ಕೃಷ್ಣಕುಮಾರ ಗೌಡ ಭಾಗವಹಿಸಿದ್ದರು.

ಮಲ್ಲೇಶ್ವರಂ ರಸ್ತೆ ಕಾಮಗಾರಿ ಡಿಸೆಂಬರ್‌ನಲ್ಲಿ ಮುಕ್ತಾಯ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಮಲ್ಲೇಶ್ವರಂ ಕ್ಷೇತ್ರದಲ್ಲಿ ವೈಟ್‌ ಟಾಪಿಂಗ್, ಒಳಚರಂಡಿ ಮತ್ತು ಕುಡಿಯುವ ನೀರಿನ ಕೊಳವೆ ಜೋಡಣೆ, ಹೊಸ ಮ್ಯಾನ್‌ಹೋಲ್‌ಗಳ ಅಳವಡಿಕೆ, ಡಕ್ಟ್‌ ನಿರ್ಮಾಣ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಡಿಸೆಂಬರ್ ವೇಳಗೆ ಬಹುತೇಕ ಪ್ರಮುಖ ಕಾಮಗಾರಿಗಳು ಪೂರ್ಣವಾಗಲಿ’ ಎಂದರು.

‘ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಸುಲಭವಾಗಿ ನಡೆಯುತ್ತದೆ. ಆದರೆ, ವಸತಿಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ರಸ್ತೆಗಳ ಗುಂಡಿ ಮುಚ್ಚುವ ಕೆಲಸವು ಮಳೆಯಿಂದಾಗಿ ನಿಧಾನವಾಗಿದೆ. ಮಳೆ ನಿಂತ ಕೂಡಲೇ ಈ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡು, ಫೆಬ್ರವರಿ ವೇಳೆಗೆ ಮುಗಿಸಲಾಗುವುದು. ಅಲ್ಲಿಯವರೆಗೂ ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಈ ವರ್ಷ ನವೆಂಬರ್‌ನಲ್ಲೂ ಮಳೆ ನಿಂತಿಲ್ಲ. ಇಷ್ಟು ವಿಪರೀತ ಮಳೆ ಕಳೆದ 50 ವರ್ಷಗಳಿಂದ ಕಂಡಿರಲಿಲ್ಲ. ಹೀಗಾಗಿ ತೊಂದರೆ ಆಗುತ್ತಿರುವುದು ನಿಜ. ಕೇವಲ ಡಾಂಬರು ಹಾಕುವುದರಿಂದ ರಸ್ತೆಗಳ ಅಭಿವೃದ್ಧಿ ಮುಗಿಯುವುದಿಲ್ಲ. ಬದಲಿಗೆ ಪ್ರತಿಯೊಂದರಲ್ಲೂ ವೈಜ್ಞಾನಿಕ ವಿಧಾನಕ್ಕೆ ಈಗ ಒತ್ತು ಕೊಡಲಾಗುತ್ತಿದೆ’ ಎಂದರು.

‘ಮಲ್ಲೇಶ್ವರಂ ನಗರದ ಹಳೆಯ ಬಡಾವಣೆಗಳಲ್ಲಿ ಒಂದಾಗಿದೆ. ಇಲ್ಲಿ ಬಹಳ ಹಿಂದೆ ಕೇವಲ ಆರು ಇಂಚಿನ ಡ್ರೈನೇಜ್‌ ಕೊಳವೆ ಹಾಕಲಾಗಿತ್ತು. ಈಗ 12 ಇಂಚಿನ ಪೈಪ್‌ ಹಾಕಲಾಗುತ್ತಿದೆ. ಜತೆಗೆ ಕುಸಿದು ಹೋಗಿದ್ದ ಹಳೆಯ ಮ್ಯಾನ್‌ಹೋಲ್‌ಗಳ ಜಾಗದಲ್ಲಿ ಹೊಸದಾಗಿ 3 ಸಾವಿರ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ, ಜನರ ಸುರಕ್ಷತೆ ದೃಷ್ಟಿಯಿಂದ ವಿದ್ಯುತ್‌ ಸಂಪರ್ಕಕ್ಕೆ ಡಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪಾದಚಾರಿ ಮಾರ್ಗಗಳನ್ಜು ಜನಸ್ನೇಹಿಯಾಗಿ ಮಾಡುತ್ತಿದ್ದೇವೆ. ಇವೆಲ್ಲವೂ ಮುಗಿದರೆ ಮುಂದಿನ 30 ವರ್ಷ ಕಾಲ ಪುನಃ ಕ್ಷೇತ್ರದಲ್ಲಿ ರಸ್ತೆಯನ್ನು ಅಗೆಯಬೇಕಾದ ಅಗತ್ಯವೇ ಇರುವುದಿಲ್ಲ’ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT