ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ‘ಕರಗ’ ದಾರಿಯಲ್ಲಿ ‘ನೃತ್ಯ’ ಗಲಾಟೆ: ಬಾಲಕನ ಕೊಲೆ

* ಮೆಜೆಸ್ಟಿಕ್‌ನಲ್ಲಿ ಘಟನೆ * ಅಪ್ರಾಪ್ತರಿಂದ ಕೃತ್ಯ
Published 25 ಏಪ್ರಿಲ್ 2024, 14:22 IST
Last Updated 25 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ಬೆಂಗಳೂರು: ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇವಸ್ಥಾನ ಎದುರು ನೃತ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ತಳ್ಳಾಟದಿಂದ ಗಲಾಟೆ ನಡೆದಿದ್ದು, ಡಿ. ಸಾರಧಿ (17) ಎಂಬಾತನನ್ನು ಕೊಲೆ ಮಾಡಲಾಗಿದೆ.

‘ಶೇಷಾದ್ರಿಪುರದ ವಿ.ವಿ. ಗಿರಿ ಕಾಲೊನಿಯ ಸಾರಧಿ, ಕರಗ ಮಹೋತ್ಸವದ ಮೆರವಣಿಗೆ ನೋಡಲೆಂದು ಏಪ್ರಿಲ್ 24ರಂದು ತಡರಾತ್ರಿ ಮೆಜೆಸ್ಟಿಕ್‌ನ ಅಣ್ಣಮ್ಮ ದೇವಸ್ಥಾನ ಬಳಿ ಬಂದಿದ್ದ. ಇದೇ ಸಂದರ್ಭದಲ್ಲಿ ಕೊಲೆ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಉಪ್ಪಾರಪೇಟೆ ಠಾಣೆ ಪೊಲೀಸರು ಹೇಳಿದರು.

‘ಏಪ್ರಿಲ್ 24ರ ನಸುಕಿನಲ್ಲಿ ಕರಗ ಮಹೋತ್ಸವ ಮೆರವಣಿಗೆ ಜರುಗಿತ್ತು. ಅಣ್ಣಮ್ಮ ದೇವಸ್ಥಾನ ಎದುರಿನ ರಸ್ತೆಯಲ್ಲಿ ಮೆರವಣಿಗೆ ಸಾಗಬೇಕಿತ್ತು. ಹೀಗಾಗಿ, ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದೇ ಸ್ಥಳದಲ್ಲಿದ್ದ ಕೆಲ ಬಾಲಕರು ನೃತ್ಯ ಮಾಡುತ್ತಿದ್ದರು’ ಎಂದು ತಿಳಿಸಿದರು.

‘ಸಾರಧಿ ಸಹ ಸ್ನೇಹಿತರ ಜೊತೆ ನಸುಕಿನ 3.30 ಗಂಟೆ ಸುಮಾರಿಗೆ ಅಣ್ಣಮ್ಮ ದೇವಸ್ಥಾನ ಎದುರು ನೃತ್ಯ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಆರೋಪಿಯೊಬ್ಬನಿಗೆ ಸಾರಧಿ ಕೈ ತಾಗಿತ್ತು. ನಂತರ, ಪರಸ್ಪರ ತಳ್ಳಾಟ ನಡೆದಿತ್ತು. ಅದರಿಂದ ಕೋಪಗೊಂಡ ನಾಲ್ವರು ಆರೋಪಿಗಳು, ಸಾರಧಿ ಹಾಗೂ ಸ್ನೇಹಿತರ ಜೊತೆ ಜಗಳ ತೆಗೆದಿದ್ದರು’ ಎಂದು ಹೇಳಿದರು.

‘ಸಾರಧಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಹೂವು ಕತ್ತರಿಸಲು ಬಳಸುವ 2 ಇಂಚಿನ ಕಟ್ಟರ್‌ನಿಂದ ಎದೆ ಹಾಗೂ ದೇಹದ ಹಲವೆಡೆ ಇರಿದಿದ್ದರು. ತೀವ್ರ ಗಾಯಗೊಂಡಿದ್ದ ಸಾರಧಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಸಾರಧಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ನಸಕಿನ 5.30 ಗಂಟೆ ಸುಮಾರಿಗೆ ಕರಗ ಮೆರವಣಿಗೆ ಅಣ್ಣಮ್ಮ ದೇವಸ್ಥಾನ ಎದುರು ಬಂದಿತ್ತು. ಇದಕ್ಕೂ ಮುನ್ನವೇ ಕೊಲೆ ನಡೆದಿದೆ’ ಎಂದು ಹೇಳಿದರು

ಬಾಲಕರಿಂದ ಕೃತ್ಯ: ‘ಕೊಲೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ಮೃತ ಸಾರಧಿ ಸ್ನೇಹಿತರು ಹಾಗೂ ಇತರರ ಹೇಳಿಕೆ ಪಡೆಯಲಾಯಿತು. ಕೃತ್ಯ ಎಸಗಿರುವ ಆರೋಪಿಗಳು, ಬಾಲಕರು ಎಂಬುದು ಗೊತ್ತಾಗಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT