ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಿಂದ ಬೆಂಗಳೂರಿಗೆ ಮೆಮು ರೈಲು

Last Updated 8 ಏಪ್ರಿಲ್ 2022, 20:48 IST
ಅಕ್ಷರ ಗಾತ್ರ

ತುಮಕೂರು: ತುಮಕೂರು– ಬೆಂಗಳೂರು ನಡುವಿನ ಮೆಮು ವಿಶೇಷ ರೈಲು (ವಿದ್ಯುತ್ ಚಾಲಿತ) ಸಂಚಾರಕ್ಕೆ ಸಂಸದ ಜಿ.ಎಸ್.ಬಸವರಾಜು ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

‘8 ಬೋಗಿಗಳ ಡೆಮು ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 16 ಬೋಗಿಗಳ ಮೆಮು ರೈಲನ್ನಾಗಿ ಪರಿವರ್ತಿಸಲಾಗಿದೆ. ನಗರದ ರೈಲು ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 30 ರೈಲುಗಳು ಸಂಚರಿಸುತ್ತಿದ್ದರೂ, ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸಂಚಾರಕ್ಕೆ ಬೇಡಿಕೆ ಬರುತ್ತಲೇ ಇದೆ. ತುಮಕೂರು– ಬೆಂಗಳೂರು ನಡುವೆ ಪ್ರತಿ ಗಂಟೆಗೊಮ್ಮೆ ಪ್ರತ್ಯೇಕ ರೈಲು ಸಂಚಾರಕ್ಕೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ. ಇದು ಶೀಘ್ರದಲ್ಲಿ ಕಾರ್ಯಗತವಾಗಲಿದೆ’ ಎಂದು ಸಂಸದರು ಹೇಳಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದ ಉದ್ಯಮಿಗಳು, ಕಾರ್ಮಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರಕ್ಕೆ ಸರ್ಕಾರ ಮುಂದಾಗಿದೆ. ನಗರ ರೈಲು ನಿಲ್ದಾಣವನ್ನು ಮೈಸೂರು, ಬೆಂಗಳೂರು ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದರು.

ತುಮಕೂರು– ದಾವಣಗೆರೆ, ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು, ತುಮಕೂರು– ಮಳವಳ್ಳಿ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲಾ ಯೋಜನೆಗಳು ಪೂರ್ಣಗೊಂಡ ನಂತರ ತುಮಕೂರು ರೈಲು ನಿಲ್ದಾಣ ಪ್ರಮುಖ ಜಂಕ್ಷನ್ ಆಗಿ ಪರಿವರ್ತನೆಯಾಗಲಿದೆ ಎಂದರು.

ತುಮಕೂರು- ರಾಯದುರ್ಗ, ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ದಾವಣಗೆರೆ ಮಾರ್ಗಕ್ಕೆ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ₹50 ಕೋಟಿ ಮೀಡಲಿಡಲಾಗಿದೆ ಎಂದು ತಿಳಿಸಿದರು.

ರೈಲು ವಿವರ

ತುಮಕೂರಿನಿಂದ ಪ್ರತಿದಿನ ಬೆಳಿಗ್ಗೆ 11.15 ಗಂಟೆಗೆ ಹೊರಟು 1.25 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಟು 3.40 ಗಂಟೆಗೆ ತುಮಕೂರು ತಲುಪಲಿದೆ.

ಕ್ಯಾತ್ಸಂದ್ರ, ಹಿರೇಹಳ್ಳಿ, ಡಾಬಸ್‍ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಬೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಯಶವಂತಪುರ, ಮಲ್ಲೇಶ್ವರಂ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT