ಮಂಗಳವಾರ, ಅಕ್ಟೋಬರ್ 26, 2021
23 °C
ಮೈಸೂರು ರಸ್ತೆಯಲ್ಲಿ ಮೆಟ್ರೊ ರೈಲು ಬದಲು: ಕೆಂಗೇರಿ ಪ್ರಯಾಣಿಕರ ಪಡಿಪಾಟಲು

Namma Metro| ನಡು ದಾರಿಯಲ್ಲಿ ಇಳಿಸದಿರಿ: ಕೆಂಗೇರಿ ಮಾರ್ಗದ ಪ್ರಯಾಣಿಕರ ಪಡಿಪಾಟಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮನ್ನು ನಡುದಾರಿಯಲ್ಲಿ ಇಳಿಸದಿರಿ. ಕೆಂಗೇರಿವರೆಗೂ ಒಂದೇ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಿ’

ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ (ನೇರಳೆ ಮಾರ್ಗ) ಮೈಸೂರು ರಸ್ತೆಯಿಂದ ಕೆಂಗೇರಿನ ನಡುವಿನ ನಿಲ್ದಾಣ
ಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಅಧಿಕಾರಿಗಳಲ್ಲಿ ಮಾಡಿಕೊಂಡಿರುವ ಕೋರಿಕೆ ಇದು.

ಕೆಂಗೇರಿ– ಬೈಯಪ್ಪನಹಳ್ಳಿ ಮೆಟ್ರೊ ಮಾರ್ಗದಲ್ಲೂ ಕೆಲವು ಮೆಟ್ರೊ ರೈಲುಗಳು ಬೈಯಪ್ಪನಹಳ್ಳಿ–ಮೈಸೂರು ರಸ್ತೆ ನಿಲ್ದಾಣದ ನಡುವೆ ಮಾತ್ರ ಸಂಚರಿಸುತ್ತಿವೆ. ಮೈಸೂರು ರಸ್ತೆಯಾಚೆಗಿನ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ಟರ್ಮಿನಲ್ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣಗಳಿಗೆ ಪ್ರಯಾಣಿಸುವವರು ಮೈಸೂರು ರಸ್ತೆ ನಿಲ್ದಾಣದಲ್ಲಿ ಇಳಿದು, ಬೇರೆ ರೈಲಿನಲ್ಲಿ ಪ್ರಯಾಣ ಮುಂದುವರಿಸಬೇಕಾಗಿದೆ.

ಬೈಯಪ್ಪನಹಳ್ಳಿ– ಮೈಸೂರು ರಸ್ತೆ ನಡುವೆ ಸಂಚರಿಸುವ ಮೆಟ್ರೊ ರೈಲು ಮೈಸೂರು ರಸ್ತೆ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ‘ಇದು ಕೊನೆಯ ನಿಲ್ದಾಣ’ ಎಂಬ ಪ್ರಕಟಣೆ ಕೇಳಿಸುತ್ತದೆ. ಈ ರೈಲು ಮೈಸೂರು ರಸ್ತೆಯಿಂದ ಮುಂದಕ್ಕೆ ಸಂಚರಿಸುವುದಿಲ್ಲ ಎಂಬ ವಿಚಾರ ತಿಳಿಯದ ಅನೇಕ ಪ್ರಯಾಣಿಕರು ಗಲಿಬಿಲಿಗೆ ಒಳಗಾಗುತ್ತಿದ್ದಾರೆ. ಒಂದೇ ರೈಲಿನಲ್ಲಿ ತಮಗೆ ಬೇಕಾದ ನಿಲ್ದಾಣ ತಲುಪುವ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್‌ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಅನೇಕ ಪ್ರಯಾಣಿಕರು ಒತ್ತಾಯಿಸಿದ್ದಾರೆ.

‘ಬಹುತೇಕರು ಬೋರ್ಡ್‌ ನೋಡಿ ಮೆಟ್ರೊ ಹತ್ತುವುದಿಲ್ಲ. ಮೈಸೂರು ರಸ್ತೆ ನಿಲ್ದಾಣದಲ್ಲಿ ದಿಢೀರ್‌ ಕೆಳಗಿಳಿಸಿದರೆ ಕೆಂಗೇರಿ ಕಡೆಗೆ ಹೋಗಬೇಕಾದ ಪ್ರಯಾಣಿಕರು ಗಲಿಬಿಲಿಗೊಳಗಾಗುವುದು ಸಹಜ. ಕೆಂಗೇರಿಗೆ ದಟ್ಟಣೆ ಅವಧಿಯಲ್ಲೂ ಪ್ರತಿ 10 ನಿಮಿಷಕ್ಕೊಂದು ರೈಲು ಮಾತ್ರ ಇದೆ. ರೈಲು ಹತ್ತುವ ಮುನ್ನ ಕಾದಿರುವ ಪ್ರಯಾಣಿಕರು ಮೈಸೂರು ರಸ್ತೆ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿಗಾಗಿ ಮತ್ತೆ ಕಾಯಬೇಕು. ಕೆಂಗೇರಿವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾದ ಬಳಿಕವೂ ಪ್ರಯಾಣಿಕರು ಈ ರೀತಿ ಅನನುಕೂಲ ಎದುರಿಸುವಂತೆ ಮಾಡುವುದು ಸರಿಯಲ್ಲ. ಕನಿಷ್ಠಪಕ್ಷ  ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಸಂಜೆ ಸಮಯದಲ್ಲಾದರೂ ಕೆಂಗೇರಿವರೆಗೆ ಒಂದೇ ರೈಲಿನಲ್ಲಿ ಸಂಚಿರಿಸುವುದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಕೆಂಗೇರಿ ನಿವಾಸಿ ವರಲಕ್ಷ್ಮಿ ಆಗ್ರಹಿಸಿದರು.

ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಬಳಿಕ ಕ್ರಮ

‘ಕೆಂಗೇರಿ ಮೆಟ್ರೊ ನಿಲ್ದಾಣಕ್ಕೆ ಪ್ರತಿ 10 ನಿಮಿಷಕ್ಕೆ ಒಂದು ಮೆಟ್ರೊ ರೈಲು ಇದೆ. ಕೆಂಗೇರಿ ಕಡೆಗೆ ಪ್ರಯಾಣಿಸುವವರ ಸಂಖ್ಯೆ ನಾವು ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ಕೋವಿಡ್‌ ಕಡಿಮೆ ಆಗುತ್ತಿದ್ದಂತೆಯೇ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿದೆ. ಮೈಸೂರು ರಸ್ತೆ–ಕೆಂಗೇರಿ ನಡುವಿನ ನಿಲ್ದಾಣಗಳಿಗೆ ಪ್ರಯಾಣಿಸುವವರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಜಾಸ್ತಿ ಆದ ಬಳಿಕ ದಟ್ಟಣೆ ಅವಧಿಯಲ್ಲಿ ಬೈಯಪ್ಪನಹಳ್ಳಿಯಿಂದ ಹೊರಡುವ ಎಲ್ಲ ರೈಲುಗಳು ಕೆಂಗೇರಿವರೆಗೆ ಸಂಚರಿಸುವುದಕ್ಕೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

‘ಸೇವಾ ನ್ಯೂನತೆಯಿಂದ ಪ್ರಯಾಣಿಕರಿಗೆ ಅನನುಕೂಲ’

ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಹೋಲಿಸಿದರೆ ಸಂಜೆ ವೇಳೆ ಕೆಂಗೇರಿ ಕಡೆಗೆ ಸಾಗುವ ಪ್ರಯಾಣಿಕರ ಸಂಖ್ಯೆ ಜಾಸ್ತಿ. ಆದರೆ, ಕೆಲವು ಮೆಟ್ರೊ ರೈಲುಗಳು ಕೆಂಗೇರಿವರೆಗೆ ಸಂಚರಿಸದ ಕಾರಣ ಮೈಸೂರು ರಸ್ತೆಯ ಆಚೆಗಿನ ಮೆಟ್ರೊ ನಿಲ್ದಾಣ ತಲುಪಬೇಕಾದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ. ಇದು ಬಿಎಂಆರ್‌ಸಿಎಲ್‌ನ ಸೇವಾ ನ್ಯೂನತೆಗೆ ಸಾಕ್ಷಿ. ಈ ಕೊರತೆಯನ್ನು ನಿಗಮವು ಸರಿಪಡಿಸಬೇಕು.

– ಭಾಸ್ಕರ್‌ ನರಸಿಂಹಯ್ಯ, ಕೆಂಗೇರಿ ನಿವಾಸಿ

***

‘ಅರ್ಧದಲ್ಲಿ ಇಳಿಸುವ ವಿಚಾರ ತಿಳಿದಿರಲಿಲ್ಲ’

ನಾನು ಕೆಂಗೇರಿವರೆಗೆ ಮೆಟ್ರೊದಲ್ಲಿ ಸಂಚರಿಸಿ, ನಂತರ ಅಲ್ಲಿಂದ ರಾಮನಗರಕ್ಕೆ ಹೋಗಬೇಕಿದೆ. ಆದರೆ, ಮೈಸೂರು ರಸ್ತೆ ನಿಲ್ದಾಣದಲ್ಲೇ ನಮ್ಮನ್ನು ಇಳಿಸುತ್ತಾರೆ ಎಂದು ತಿಳಿದಿರಲಿಲ್ಲ. ಮಾರ್ಗ ಮಧ್ಯೆ ಪ್ರಯಾಣಿಕರನ್ನು ಇಳಿಸಿ ಮತ್ತೊಂದು ರೈಲಿನಲ್ಲಿ ಪ್ರಯಾಣಿಸುವಂತೆ ಸೂಚಿಸುವುದು ಸರಿಯಾದ ಕ್ರಮವಲ್ಲ. ಅರ್ಧದಲ್ಲೇ ಇಳಿಯಬೇಕಾಗುತ್ತದೆ ಎಂಬ ಕುರಿತು ಯಾವ ನಿಲ್ದಾಣಗಳಲ್ಲೂ ಸೂಚನೆಗಳನ್ನು ಹಾಕಿಲ್ಲ

ಪ್ರೀತಂ, ರಾಮನಗರ ನಿವಾಸಿ

***

‘ದಟ್ಟಣೆ ಅವಧಿಯಲ್ಲಾದರೂ ಕೆಂಗೇರಿವರೆಗೆ ಸಾಗಲಿ’

ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವಾಗ ಬೇಕಿದ್ದರೆ, ಕೆಲವೊಂದು ಮೆಟ್ರೊ ರೈಲುಗಳು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮಾತ್ರ ಸಂಚರಿಸಲಿ. ಆದರೆ, ದಟ್ಟಣೆ ಅವಧಿಯಲ್ಲಿ ಒಂದೇ ರೈಲಿನಲ್ಲಿ ಕೆಂಗೇರಿವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ನಾನು ನಿತ್ಯ ಸಂಜೆ ವೇಳೆ ಇಂದಿರಾನಗರದಿಂದ ಕೆಂಗೇರಿಗೆ ಪ್ರಯಾಣಿಸುತ್ತೇನೆ. ಮೈಸೂರು ರಸ್ತೆ ನಿಲ್ದಾಣದಲ್ಲಿ ಇಳಿದು, ಮತ್ತೊಂದು ರೈಲಿಗಾಗಿ ಕಾಯುವುದು ಕಿರಿಕಿರಿದಾಯಕ

ಪೂರ್ವಿ, ಕೆಂಗೇರಿ ನಿವಾಸಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು