ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಮಾರ್ಗ 300 ಕಿ.ಮೀ.ಗೆ ವಿಸ್ತರಣೆ: ಬಿ.ಎಸ್.ಯಡಿಯೂರಪ್ಪ

3ನೇ ಹಂತದಲ್ಲಿ ಹೊಸಕೋಟೆವರೆಗೆ ಮೆಟ್ರೊ
Last Updated 8 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಯಲಹಂಕ: ‘2025ರ ವೇಳೆಗೆ ನಮ್ಮ ಮೆಟ್ರೊ ರೈಲು ಮಾರ್ಗವನ್ನು 300 ಕಿ.ಮೀ.ಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಯಲಹಂಕ ಉಪನಗರದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘2021ರ ಅಂತ್ಯದೊಳಗೆ ನಮ್ಮ ಮೆಟ್ರೊ 2ನೇ ಹಂತದ ಯೋಜನೆ ಪೂರ್ಣಗೊಳ್ಳಲಿದೆ. ಹೊರವರ್ತುಲ ರಸ್ತೆ ಮೂಲಕ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆ 2023ರಲ್ಲಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಮೆಟ್ರೊ 3ನೇ ಹಂತದ ಯೋಜನೆಯನ್ನು ಹೊಸಕೋಟೆ ತನಕ ವಿಸ್ತರಿಸಲು ತೀರ್ಮಾನಿಸಲಾಗಿದೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಯಲಹಂಕ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ದಲಿತರ ಸ್ಮಶಾನ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗುವುದು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಅಕ್ರಮ– ಸಕ್ರಮ ಯೋಜನೆಯಡಿ ಹಕ್ಕು ಪತ್ರ ವಿತರಿಸಿರುವುದು ಸ್ವಾಗತಾರ್ಹ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ‘ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ಸೂತ್ರವನ್ನು ಒಳಗೊಂಡ ಜಗತ್ತಿನ ಏಕೈಕ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ಅವರ ಹೆಸರಿನಲ್ಲಿ ಭವನ ನಿರ್ಮಿಸಿರುವುದು ಅರ್ಥಪೂರ್ಣ’ ಎಂದು ಹೇಳಿದರು.

ಶಾಸಕ ಎಸ್.ಆರ್.ವಿಶ್ವನಾಥ್, ‘ಅಂಬೇಡ್ಕರ್ ಭವನ ನಿರ್ಮಾಣ ಆಗಬೇಕೆಂದು ಏಳೆಂಟು ವರ್ಷಗಳಿಂದ ದಲಿತ ಸಂಘಟನೆಗಳ ಮುಖಂಡರು ಒತ್ತಾಯ ಮಾಡುತ್ತಿದ್ದರು. ಬಹುದಿನಗಳ ಅವರ ಬೇಡಿಕೆ ಈಡೇರಿದೆ. ಈ ಭಾಗದ ಜನರ ಕಾರ್ಯಕ್ರಮಗಳಿಗೆ ಕಡಿಮೆ ಬಡಿಗೆ ಶುಲ್ಕ ನಿಗದಿ ಮಾಡುತ್ತೇವೆ’ ಎಂದು ತಿಳಿಸಿದರು.

₹400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ ವೇಳೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಸುಸಜ್ಜಿತ ಭವನ

ಬಿಬಿಎಂಪಿ ವತಿಯಿಂದ ಯಲಹಂಕ ಉಪನಗರದಲ್ಲಿ ₹11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೂರು ಅಂತಸ್ತುಗಳ ಅಂಬೇಡ್ಕರ್ ಭವನದಲ್ಲಿ 432 ಆಸನಗಳ ವ್ಯವಸ್ಥೆ ಇದೆ.

ಸಂಪೂರ್ಣ ಹವಾನಿಯಂತ್ರಿತ ಕೊಠಡಿಯಲ್ಲಿ ಡಿಟಿಎಸ್ ಧ್ವನಿವರ್ಧಕ ಸೌಲಭ್ಯ, 7 ಪರದೆಗಳನ್ನು ಒಳಗೊಂಡ ವೇದಿಕೆ ನಿರ್ಮಿಸಲಾಗಿದೆ. ಮೊದಲ ಅಂತಸ್ತಿನಲ್ಲಿ 1 ಸಾವಿರ ಆಸನ ವ್ಯವಸ್ಥೆಯ ವಿಶಾಲವಾದ ಸಭಾಂಗಣವಿದೆ. ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT