ಸೋಮವಾರ, ಏಪ್ರಿಲ್ 6, 2020
19 °C

ಜನತಾ ಕರ್ಫ್ಯೂ: ಭಾನುವಾರ (ಮಾರ್ಚ್ 22) ಮೆಟ್ರೊ ರೈಲು ಸಂಚಾರ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಕರೆಯ ಮೇರೆಗೆ ಮಾ. 22ರಂದು ದೇಶದಾದ್ಯಂತ ಜನತಾ ಕರ್ಫ್ಯೂ ಹೇರಿರುವ ಕಾರಣ ಅಂದು ನಗರದಲ್ಲಿ ಮೆಟ್ರೊ ರೈಲು ಸಂಚಾರ ಇರುವುದಿಲ್ಲ. 

‘ಸೋಂಕು ಹರಡುವುದನ್ನು ತಡೆಯಲು ಅಂದು ಸಾರ್ವಜನಿಕರು ಮನೆಯಲ್ಲಿಯೇ ಉಳಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಟ್ವೀಟ್‌ ಮಾಡಿದೆ. 

22ರಂದು ಮಾತ್ರವಲ್ಲದೆ, ಉಳಿದ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ನಿಗಮದಿಂದ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆಯೂ ಬಿಎಂಆರ್‌ಸಿಎಲ್‌ ಪ್ರಕಟಣೆ ಹೊರಡಿಸಿದೆ. 

ಅನಗತ್ಯ ಪ್ರಯಾಣ ಬೇಡ: ತೀರಾ ಅಗತ್ಯವಿದ್ದಲ್ಲಿ ಮಾತ್ರ ಮೆಟ್ರೊ ರೈಲು ಬಳಸಿ. ಅನಗತ್ಯ ಪ್ರಯಾಣ ಬೇಡ. ಈ ನಿಟ್ಟಿನಲ್ಲಿ ಸಂಚರಿಸುವ ರೈಲುಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ.  60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ವಯಸ್ಸಿನೊಳಗಿರುವವರಿಗೆ ಸೋಂಕು ಬೇಗ ಹರಡುವ ಕಾರಣ, ಮೆಟ್ರೊ ರೈಲಿನಲ್ಲಿ ಇವರ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. 

ಉಷ್ಣಾಂಶ ಪರೀಕ್ಷೆ: ಮೆಟ್ರೊ ನಿಲ್ದಾಣಗಳಲ್ಲಿ ಮುಂದೆ, ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ (ಥರ್ಮಲ್‌ ಸ್ಕ್ಯಾನಿಂಗ್‌ ) ಮಾಡಲಾಗುವುದು. ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ಅಥವಾ ಕೋವಿಡ್‌–19 ಲಕ್ಷಣ ಹೊಂದಿದ್ದರೆ ಅವರನ್ನು ವೈದ್ಯರ ಬಳಿ ಕಳಿಸಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.

ನಿಗದಿತ ಅಂತರವಿರಲಿ: ಮೆಟ್ರೊದಲ್ಲಿ ಪ್ರಯಾಣಿಸುವ ವೇಳೆ ಅಥವಾ ಭದ್ರತಾ ಸಿಬ್ಬಂದಿಯಿಂದ ತಪಾಸಣೆಗೆ ಒಳಗಾಗುವ ಸಂದರ್ಭದಲ್ಲಿ ಸಾರ್ವಜನಿಕರು ಕನಿಷ್ಠ 1 ಮೀಟರ್‌ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನಿಗಮ ಮನವಿ ಮಾಡಿದೆ. 

ನಿಯಮ ಮೀರಿದರೆ ನಿಲುಗಡೆಯಿಲ್ಲ

ರೈಲಿನಲ್ಲಿ ಪ್ರಯಾಣಿಕರು ನಿಗದಿತ ಅಂತರ ಕಾಯ್ದುಕೊಳ್ಳದಿದ್ದರೆ, ಮುಂದಿನ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡುವುದಿಲ್ಲ. ಅಂದರೆ, ಬೋಗಿ ಹೆಚ್ಚು ಪ್ರಯಾಣಿಕರಿಂದ ತುಂಬಿದ್ದರೆ ಮುಂದಿನ ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುವುದಿಲ್ಲ ಎಂದು ನಿಗಮ ಹೇಳಿದೆ. 

ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಥವಾ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಮೆಟ್ರೊ ರೈಲು ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ತಪ್ಪದೇ ಪಾಲಿಸಿ ಎಂದೂ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು