ಭಾನುವಾರ, ಆಗಸ್ಟ್ 18, 2019
26 °C

ಮೆಟ್ರೊ: ಟಾಪ್‌ಅಪ್‌ ಸಮಸ್ಯೆ ನಿವಾರಣೆ

Published:
Updated:

ಬೆಂಗಳೂರು: ಆನ್‌ಲೈನ್‌ನಲ್ಲಿ ಮೆಟ್ರೊ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಅಥವಾ ಟಾಪ್‌ಅಪ್‌ ಮಾಡಲು ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ. 

‘ಈ ತೊಂದರೆಗೆ ವಿಷಾದವಿದೆ. ಸಮಸ್ಯೆ ಎದುರಿಸಿದ ಪ್ರಯಾಣಿಕರು ಮೆಟ್ರೊ ನಿಲ್ದಾಣದ ಟಿಕೆಟ್‌ ಕೌಂಟರ್‌
ಗಳಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬಹುದು’ ಎಂದು ನಿಗಮ ಹೇಳಿದೆ. ಬಿಎಂಆರ್‌ಸಿಎಲ್‌ ವೆಬ್‌ಸೈಟ್‌, ಕರ್ನಾಟಕ ಮೊಬೈಲ್‌ ಒನ್‌ ಅಪ್ಲಿಕೇಷನ್‌ ಮತ್ತು ‘ಬ್ಯಾಂಕ್‌ ಆಟೊ’ ಮೂಲಕ ಆನ್‌ಲೈನ್‌ನಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಬಹುದಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಜುಲೈ 29ರಿಂದ ಆಗಸ್ಟ್‌ 3ರವರೆಗೆ ಒಟ್ಟು 3,092 ಪ್ರಯಾಣಿಕರು ಟಾಪ್‌ಅಪ್ ಮಾಡಿಕೊಳ್ಳಲಾಗದೆ ಸಮಸ್ಯೆ ಎದುರಿಸಿದ್ದರು.

ತ್ವರಿತ ಕಾಮಗಾರಿಗೆ ಮೇಯರ್ ಪತ್ರ

ಬೆಂಗಳೂರು: ರೈಲ್ವೆ ಇಲಾಖೆಯಿಂದ ನಗರದಲ್ಲಿ ಕೈಗೆತ್ತಿಕೊಂಡಿರುವ ಕೆಳ ಸೇತುವೆ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ಕುಮಾರ್ ಅವರಿಗೆ ಮೇಯರ್ ಗಂಗಾಂಬಿಕೆ ಪತ್ರ ಬರೆದಿದ್ದಾರೆ.

ವಾಹನ ಸಂಚಾರಕ್ಕೆ ಅಡಚಣೆ ಆಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಿಬಿಎಂಪಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ರೈಲ್ವೆ ಅಂಡರ್ ಪಾಸ್‌ಗಳಲ್ಲಿ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ರೈಲುಗಳ ಶೌಚಾಲಯಗಳಿಂದ ಮಲಿನ ನೀರು ಬೀಳುವುದನ್ನು ತಪ್ಪಿಸಲು ಕೈಗೊಂಡಿರುವ ಕ್ರಮಕ್ಕೆ ಇದೇ ವೇಳೆ ಧನ್ಯವಾದ ಸಲ್ಲಿಸಿದ್ದಾರೆ. ಮಲಿನ ನೀರು ರಸ್ತೆಗೆ ಬೀಳುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಜೂನ್ 18ರಂದು ಅಶೋಕ್‌ಕುಮಾರ್ ಅವರಿಗೆ ಮೇಯರ್ ಪತ್ರ ಬರೆದಿದ್ದರು.

ನೀರಿನ ಅದಾಲತ್‌

ಬೆಂಗಳೂರು: ಜಲಮಂಡಳಿಯ ಕೇಂದ್ರ-2 ಉಪವಿಭಾಗದ ಹೈಗ್ರೌಂಡ್ಸ್ (ಎಚ್‌.ಜಿ.ಆರ್), ಕೋಲ್ಸ್ ಪಾರ್ಕ್ ಸೇವಾ ಠಾಣೆ ವ್ಯಾಪ್ತಿಯ ನೀರಿನ ಅದಾಲತ್‌ ಆಗಸ್ಟ್‌ 14ರಂದು ಬೆಳಿಗ್ಗೆ 9.30ರಿಂದ 11 ಗಂಟೆಯವರೆಗೆ ನಡೆಯಲಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು.

ಸ್ಥಳ–ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ, ಮಿಲ್ಲರ್ಸ್‌ ರಸ್ತೆ.

ದೂರವಾಣಿ ಸಂಖ್ಯೆ:080 22945191 ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ:8762228888

 

Post Comments (+)