ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿದ್ದರೆ ನಿಲ್ಲದು ರೈಲು

‘ನಮ್ಮ ಮೆಟ್ರೊ’ ಪ್ರಯಾಣಿಕರ ಸುರಕ್ಷತೆ * ನಿಯಮ ಬಿಗಿಗೊಳಿಸಲಿದೆ ಬಿಎಂಆರ್‌ಸಿಎಲ್‌
Last Updated 29 ಮೇ 2020, 18:38 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿದಷ್ಟೂ ಕೋವಿಡ್‌– 19 ಸೋಂಕು ಹರಡುವ ಅಪಾಯ ಹೆಚ್ಚು. ಅನುಮತಿ ಸಿಗುತ್ತಿದ್ದಂತೆಯೇ ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನಿಯಂತ್ರಿಸುವುದಕ್ಕೂ ಕಠಿಣ ನಿಯಮಗಳ ಜಾರಿಗೆ ಮುಂದಾಗಿದೆ.

ಪ್ರಯಾಣಿಕರು ಸುರಕ್ಷತಾ ತಪಾಸಣೆಗೆ ಒಳಗಾಗಿ ನಿಲ್ದಾಣ ಪ್ರವೇಶಿಸಬಹುದು. ಆದರೆ, ಅಲ್ಲಿಂದಪ್ಲ್ಯಾಟ್‌ಫಾರ್ಮ್‌ಗೆ ಎಷ್ಟು ಮಂದಿಯನ್ನು ಬಿಡಬೇಕು ಎಂಬುದನ್ನು ನಿಲ್ದಾಣದ ಸಿಬ್ಬಂದಿ ನಿರ್ಧರಿಸುತ್ತಾರೆ. ಪ್ಲ್ಯಾಟ್‌ಫಾರ್ಮ್‌ನಲ್ಲಿ ಸ್ಥಳಾವಕಾಶ ಕಲ್ಪಿಸಿರುವುದಕ್ಕಿಂತ ಹೆಚ್ಚು ಮಂದಿ ಅಲ್ಲಿ ಸೇರುವ ಸೂಚನೆ ಸಿಕ್ಕರೆ ಪ್ರಯಾಣಿಕರು ಪ್ಲ್ಯಾಟ್‌ಫಾರ್ಮ್‌ ಪ್ರವೇಶಿಸದಂತೆ ಎಎಫ್‌ಸಿ ಗೇಟ್‌ ಬಳಿಯೇ ಅವರನ್ನು ಸಿಬ್ಬಂದಿ ತಡೆಯಲಿದ್ದಾರೆ.

ಇಷ್ಟೆಲ್ಲಾ ಆಗಿಯೂ ಯಾವುದಾದರೂ ಪ್ಲ್ಯಾಟ್‌ಫಾರ್ಮ್‌ನಲ್ಲಿ ಜನಜಂಗುಳಿ ಹೆಚ್ಚು ಇದ್ದರೆ, ಅಲ್ಲಿ ರೈಲನ್ನು ನಿಲ್ಲಿಸದೆಯೇ ಮುಂದಕ್ಕೆ ಹೋಗುವುದಕ್ಕೆ ಚಾಲಕನಿಗೆ ನಿಗಮ ಅಧಿಕಾರ ನೀಡಲಿದೆ. ಚಾಲಕ ಮುಂದಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಬಹುದು. ಆದರೆ, ಜನಜಂಗುಳಿ ಇದ್ದೂ ಆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಇಳಿಯುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು ಇದೆ ಎಂದಾದರೆ ಚಾಲಕ ವಿವೇಚನೆ ಬಳಸಿ ಅಲ್ಲಿ ರೈಲು ನಿಲ್ಲಿಸುವ ನಿರ್ಧಾರ ತಳೆಯಬಹುದು.

ಪ್ಲ್ಯಾಟ್‌ಫಾರ್ಮ್‌ನಲ್ಲೂ ಪ್ರಯಾಣಿಕರು ಹಳದಿ ಪಟ್ಟಿಯಲ್ಲಿ ಗುರುತು ಮಾಡಿದ ಜಾಗದಲ್ಲೇ ನಿಲ್ಲಬೇಕು. ಸುರಕ್ಷಿತ ಅಂತರ ಕಾಪಾಡದ ಅಥವಾ ನಿಯಮ ಪಾಲಿಸದ ಪ್ರಯಾಣಿಕರ ವಿರುದ್ಧ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ.

ತೂಕ 240 ಟನ್‌ಗಿಂತ ಹೆಚ್ಚಾದರೆ ರೈಲು ಹೊರಡದು

ಒಂದು ರೈಲಿನಲ್ಲಿ ಏಕಕಾಲಕ್ಕೆ 346 ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತದೆ. ಅಕ್ಕಪಕ್ಕದ ಒಂದು ಆಸನ ಬಿಟ್ಟು ಕುಳಿತುಕೊಳ್ಳಬೇಕು. ಹಾಗಾಗಿ ರೈಲಿನಲ್ಲಿ ಒಮ್ಮೆಗೆ 160 ಮಂದಿ ಮಾತ್ರ ಕುಳಿತುಕೊಂಡು ಪ್ರಯಾಣಿಸಬಹುದು. ಅಂತರ ಕಾಪಾಡಬೇಕಿರುವುದರಿಂದ 186 ಮಂದಿ ಮಾತ್ರ ನಿಂತು ಪ್ರಯಾಣಿಸಬಹುದು.

ರೈಲಿನಲ್ಲಿರುವ ಎಲ್ಲ ಪ್ರಯಾಣಿಕರ ಹಾಗೂ ಅವರ ಲಗೇಜ್‌ನ ಒಟ್ಟು ತೂಕ 240 ಟನ್‌ಗೆ ಮಿತಿಗೊಳಿಸಲಾಗಿದೆ. ತೂಕವು 240 ಟನ್‌ಗಿಂತ ಹೆಚ್ಚಾಗಿದ್ದರೆ ಚಾಲಕನಿಗೆ ಸೂಚನೆ ಸಿಗಲಿದೆ. ಆಗ ಕೆಲವು ಪ್ರಯಾಣಿಕರನ್ನು ಇಳಿಸಿದ ಬಳಿಕವೇ ರೈಲು ಹೊರಡಲಿದೆ.

ತೂಕ ನಿಯಂತ್ರಣದ ಸಲುವಾಗಿಯೇ ಒಬ್ಬ ಪ್ರಯಾಣಿಕ ಏಕಕಾಲದಲ್ಲಿ ಒಂದು ಬ್ಯಾಗ್‌ ಒಯ್ಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT