ಶನಿವಾರ, ಸೆಪ್ಟೆಂಬರ್ 18, 2021
29 °C
‘ನಮ್ಮ ಮೆಟ್ರೊ’ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಸಂಸದ ತೇಜಸ್ವಿ ಸೂರ್ಯ

ವಿಮಾನ ನಿಲ್ದಾಣ ಮೆಟ್ರೊ ಮಾರ್ಗ 2025ರೊಳಗೆ ಸಿದ್ಧ: ಸಂಸದ ತೇಜಸ್ವಿ ಸೂರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ‘ದ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಸಿಲ್ಕ್‌ಬೋರ್ಡ್‌–ಕೆ.ಆರ್.ಪುರ– ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ (2, 2ಎ ಮತ್ತು 2ಬಿ) ಕಾಮಗಾರಿಗಳು 2025ರೊಳಗೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. 

ಡೇರಿ ವೃತ್ತದ ಬಳಿ ಮೆಟ್ರೊ ಸುರಂಗ ಮಾರ್ಗ ಕೊರೆಯುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಜಾಗತಿಕವಾಗಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಮುನ್ನಗ್ಗುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮೆಟ್ರೊ ರೈಲು ಸೌಕರ್ಯವೇ ಸೂಕ್ತ. ಗಡುವಿಗೂ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪ್ರಸ್ತುತ 56 ಕಿ.ಮೀ. ಇರುವ ಮೆಟ್ರೊ ರೈಲು ಮಾರ್ಗದ ಉದ್ದವು 2025ರೊಳಗಾಗಿ 175 ಕಿ.ಮೀ.ಗೆ ಹೆಚ್ಚಲಿದೆ. ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಮಗ್ರ ಸಂಚಾರ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಾಮಗಾರಿಗೆ ಅಗತ್ಯವಿರುವ ಶೇ 99ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಕಾಮಗಾರಿ ತ್ವರಿತವಾಗಿ ನಡೆಯುತ್ತಿ‌ರುವುದಕ್ಕೆ ಭೂಸ್ವಾಧೀನ ನೀತಿಯಲ್ಲಿ ತಂದಿರುವ ಬದಲಾವಣೆಗಳು ಕೂಡ ಕಾರಣ’ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ಸಂಚಾರ ಕಾರ್ಡ್‌

‘ಕೇಂದ್ರ ಸರ್ಕಾರವು ಇದೇ ಸೆಪ್ಟೆಂಬರ್‌ ಒಳಗಾಗಿ ಸಾಮಾನ್ಯ ಸಂಚಾರ ಗುರುತಿನ ಚೀಟಿಯನ್ನು (ಕಾಮನ್‌ ಮೊಬಿಲಿಟಿ ಕಾರ್ಡ್‌) ಮೆಟ್ರೊ ರೈಲು ಸೇವೆಗಳಿಗೂ ವಿಸ್ತರಿಸಲು ತೀರ್ಮಾನಿಸಿದೆ. ಈ ಕಾರ್ಡ್‌ ಅನ್ನು ದೇಶದಾದ್ಯಂತ ಎಲ್ಲ ವಿಧದ ಸಾರಿಗೆ ಸೌಲಭ್ಯಗಳನ್ನು ಪಡೆಯಲು ಬಳಸಬಹುದು’ ಎಂದೂ ಅವರು ಹೇಳಿದರು.

10 ಸಾವಿರ ಸಸಿ

‘ಮೆಟ್ರೊ ಕಾಮಗಾರಿಯ ಸಂದರ್ಭದಲ್ಲಿ ತೆರವುಗೊಳಿಸಿರುವ ಮರಗಳಿಗೆ ಬದಲಾಗಿ 10 ಸಾವಿರಕ್ಕೂ ಅಧಿಕ ಸಸಿಗಳನ್ನು ನಿಗಮವು ನೆಟ್ಟು ಬೆಳೆಸಲಿದೆ. ಸಾರ್ವಜನಿಕರನ್ನೂ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದೆ’ ಎಂದು ಸಂಸದ ಹೇಳಿದರು. 

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹಾಗೂ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಇದ್ದರು.

11, 12ರಂದು ಮೆಟ್ರೊ ರೈಲು ಭಾಗಶಃ ಸ್ಥಗಿತ

ನಮ್ಮ ಮೆಟ್ರೊದ ಕೆಂಗೇರಿ ವಿಸ್ತರಿತ ಮಾರ್ಗವನ್ನು ಅಂತಿಮ ಕಾರ್ಯಾಚರಣೆಗೆ ಸಜ್ಜುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಆ.11 ಮತ್ತು 12ರಂದು ನೇರಳೆ ಮಾರ್ಗದ ವಿಜಯನಗರ ಮತ್ತು ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

‘ಈ ಎರಡು ದಿನ ಬೈಯಪ್ಪನಹಳ್ಳಿಯಿಂದ ವಿಜಯನಗರ ಮೆಟ್ರೊ ನಿಲ್ದಾಣಗಳ ನಡುವೆ ಮಾತ್ರ ಸೇವೆ ಲಭ್ಯ ಇರಲಿದೆ’ ಎಂದು ನಿಗಮವು ಪ್ರಕಟಣೆಯಲ್ಲಿ ಹೇಳಿದೆ.

‘ಕಾರ್ಯಾಚರಣೆ ಪೂರ್ಣಗೊಂಡ ನಂತರ, ಅಂದರೆ, ಆ. 13ರಿಂದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣದವರೆಗಿನ ನೇರಳೆ ಮಾರ್ಗದಲ್ಲಿ ಎಂದಿನಂತೆ ಸೇವೆ ಲಭ್ಯ ಇರಲಿದೆ’ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಹಸಿರು ಮಾರ್ಗದ ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯವರೆಗಿನ ಮೆಟ್ರೊ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ನಿಗಮ ಸ್ಪಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು