ಶನಿವಾರ, ಆಗಸ್ಟ್ 13, 2022
23 °C
ಮೈಕೊ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಕಿರುಕುಳದಿಂದ ಬೇಸತ್ತು ಕೃತ್ಯವೆಂದ ಆರೋಪಿ

ಉದ್ಯಮಿಯ ಕೊಂದು ಠಾಣೆಗೆ ಶರಣಾದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಕೊ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ದಿಲಿಬಾನ್ (46) ಎಂಬುವರನ್ನು ಕೊಲೆ ಮಾಡಲಾಗಿದ್ದು, ‘ನಾನೇ ಕೊಲೆ ಮಾಡಿದ್ದೇನೆ’ ಎಂಬುದಾಗಿ ತಪ್ಪೊಪ್ಪಿಕೊಂಡು ರಿಷಿಕಾ (38) ಎಂಬಾಕೆ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.

‘ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ಅದಾಗಿ ಕೆಲ ನಿಮಿಷಗಳಲ್ಲೇ ರಿಷಿಕಾ ಠಾಣೆಗೆ ಬಂದು ಶರಣಾಗಿದ್ದಾಳೆ. ಆಕೆ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಸ್ನೇಹ ಬೆಳೆದು ಸಲುಗೆ: ‘ಆರೋಪಿ ರಿಷಿಕಾ, ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಉದ್ಯಮಿಯಾಗಿದ್ದ ದಿಲಿಬಾನ್ ಅವರಿಗೂ ಮದುವೆಯಾಗಿ ಮಕ್ಕಳಿದ್ದಾರೆ. ರಿಷಿಕಾ ಹಾಗೂ ದಿಲಿಬಾನ್ ನಡುವೆ ಕೆಲ ವರ್ಷಗಳ ಹಿಂದೆ ಸ್ನೇಹ ಏರ್ಪಟ್ಟಿತ್ತು. ನಂತರ, ಅವರಿಬ್ಬರು ಸಲುಗೆಯಿಂದ ಇದ್ದರು. ಉದ್ಯಮಿಯು ಆಗಾಗ ಆರೋಪಿ ಮನೆಗೂ ಹೋಗಿ ಬರುತ್ತಿದ್ದರು. ಒಟ್ಟಿಗೆ ಪ್ರವಾಸವನ್ನೂ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ತನಗೆ ಮದುವೆಯಾಗಿ ಮಕ್ಕಳಿದ್ದು, ಹೆಚ್ಚು ಸಲುಗೆ ಬೇಡವೆಂದು ರಿಷಿಕಾ ಉದ್ಯಮಿಗೆ ಬುದ್ದಿವಾದ ಹೇಳಿದ್ದಳು. ಅದಕ್ಕೆ ಒಪ್ಪದ ಉದ್ಯಮಿ, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದರು. ‘ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಾ. ಇಬ್ಬರೂ ವಿದೇಶಕ್ಕೆ ಹೋಗಿ, ಅಲ್ಲಿಯೇ ವಾಸವಿರೋಣ’ ಎಂಬುದಾಗಿ ಪೀಡಿಸಲಾರಂಭಿಸಿದ್ದರು. ಇದೇ ವಿಚಾರವಾಗಿ ಅವರಿಬ್ಬರ ನಡುವೆ ವೈಮನಸ್ಸು ಏರ್ಪಟ್ಟಿತ್ತು.’

‘ಶುಕ್ರವಾರ ರಾತ್ರಿಯೂ ಮದ್ಯ ಕುಡಿದು ರಿಷಿಕಾ ಮನೆಗೆ ಬಂದಿದ್ದ ದಿಲಿಬಾನ್, ಜಗಳವಾಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿಟ್ಟಾದ ರಿಷಿಕಾ, ಉದ್ಯಮಿಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಪ್ರಾಣ ಹೋದ ನಂತರವೇ ಠಾಣೆಗೆ ಬಂದಿದ್ದಾರೆ. ಈ ಬಗ್ಗೆ ಆರೋಪಿಯೇ ಹೇಳಿಕೆ ನೀಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು