ಶುಕ್ರವಾರ, ಫೆಬ್ರವರಿ 28, 2020
19 °C
ನಿಷೇದಾಜ್ಞೆ ಜಾರಿ

ಬಿಸಿಯೂಟ ಕಾರ್ಯಕರ್ತೆಯರಿಂದ ರ‍್ಯಾಲಿಗೆ ಸಿದ್ಧತೆ: ಪ್ರತಿಭಟನೆಗೆ ಅನುಮತಿ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಹಮ್ಮಿಕೊಳ್ಳಲು ತೀರ್ಮಾನಿಸಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಕಾರ್ಯಕರ್ತೆಯರಿಗೆ ಅನ್ವಯವಾಗುವಂತೆ ಸೋಮವಾರದಿಂದ ಮುಂದಿನ 20 ದಿನಗಳವರೆಗೆ ದಂಡ ‍‍ಪ್ರಕ್ರಿಯಾ ಸಂಹಿತೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಈ ಸಂಬಂಧ ಭಾನುವಾರ ಆದೇಶ ಹೊರಡಿಸಿರುವ ಭಾಸ್ಕರ್ ರಾವ್, ‘ಸಂಘದ ಪದಾಧಿಕಾರಿಗಳ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳು ಹಾಗೂ ಸಾರ್ವಜನಿಕರಿಗೆ ಉಂಟಾಗಿದ್ದ ತೊಂದರೆ ಉಲ್ಲೇಖಿಸಿ ಪಶ್ಚಿಮ ವಿಭಾಗದ ಡಿಸಿಪಿ ಸಲ್ಲಿಸಿದ್ದ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಅಧ್ಯಕ್ಷೆ ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ, ಉಪಾಧ್ಯಕ್ಷೆ ಸಿದ್ದಮ್ಮ ಹಾಗೂ ಖಜಾಂಚಿ ಮಹಾದೇವಮ್ಮ ನೇತೃತ್ವದಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಇದೇ 3ರಂದು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಮೆರವಣಿಗೆ ನಡೆಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಿದ್ದಾರೆ. ಇದಕ್ಕಾಗಿ ಅನುಮತಿ ಕೋರಿದ್ದರು. ಡಿಸಿಪಿ ಅವರು ನಿರಾಕರಿಸಿದ್ದಾರೆ’ ಎಂದೂ ಆದೇಶದಲ್ಲಿ ಹೇಳಿದ್ದಾರೆ.

‘2013ರ ಜನವರಿ 21, 2016ರ ಸೆಪ್ಟೆಂಬರ್ 2, 2017ರ ಮಾರ್ಚ್ 20, ಸೆಪ್ಟೆಂಬರ್ 14, 2018ರ ಫೆಬ್ರುವರಿ 8, 2019ರ ಡಿಸೆಂಬರ್ 10ರಂದು ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನಕಾರರು ರಸ್ತೆಯಲ್ಲಿ ಕುಳಿತು ವಾಹನಗಳ ಹಾಗೂ ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಅನುಮತಿ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಸಂಬಂಧ ಪದಾಧಿಕಾರಿಗಳ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಪುನಃ ಪ್ರತಿಭಟನೆ ಮಾಡಿದರೆ ಅಶಾಂತಿ ಸೃಷ್ಟಿಸುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಇದೇ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ’ ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.

‘20 ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ಉದ್ಯಾನದಲ್ಲಿ ಸ್ಥಳಾವಕಾಶವಿಲ್ಲ. ಮೆರವಣಿಗೆ ನಡೆಸಿದರೆ ಸಂಚಾರ ದಟ್ಟಣೆ ಉಂಟಾಗಿ ಶೇಷಾದ್ರಿ ರಸ್ತೆಯೇ ಬಂದ್ ಆಗಲಿದೆ. ಉದ್ಯಾನ ಸಮೀಪದಲ್ಲೇ ಮಹಾರಾಣಿ ಕಾಲೇಜು ಹಾಗೂ ಹಾಸ್ಟೆಲ್‌ಗಳಿವೆ. ಅಲ್ಲಿಯ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಉದ್ಯಾನಕ್ಕೆ ಬಂದು ಕುಳಿತರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ, ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆಯೇ ಹೆಚ್ಚು’ ಎಂದೂ ಉಲ್ಲೇಖಿಸಿದ್ದಾರೆ.

‘ಪ್ರತಿಭಟನೆ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟರೆ ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಈ ಪ್ರಕರಣ ಗಂಭೀರವಾದದ್ದು ಎಂಬುದು ಸಾಬೀತಾಗಿದೆ. ಹೀಗಾಗಿಯೇ ನಿಷೇಧಾಜ್ಞೆ ಹೊರಡಿಸಲಾಗಿದೆ’ ಎಂದೂ ಹೇಳಿದ್ದಾರೆ.

‘ಶಾಂತಿಯುತ ಹೋರಾಟ ಮಾಡೇ ಮಾಡುತ್ತೇವೆ’

‘ಇದು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ. ನಾವು ಇದಕ್ಕೆ ಭಯಪಡುವುದಿಲ್ಲ. ಶಾಂತಿಯುತ ಹೋರಾಟ ಮಾಡೇ ಮಾಡುತ್ತೇವೆ’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

‘ಪ್ರಜಾವಾಣಿ‘ ಜೊತೆ ಮಾತನಾಡಿದ ಅವರು, ‘2,600 ಸಂಬಳ ತೆಗೆದುಕೊಳ್ಳುವ ಹೆಣ್ಣು ಮಕ್ಕಳು, ತಮ್ಮ ಹಕ್ಕು ಕೇಳಲು ಬರುವಾಗ ನಿಷೇಧಾಜ್ಞೆ ಹೇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

’ರಾಜ್ಯದ ಹಲವು ಜಿಲ್ಲೆಗಳಿಂದ ಕಾರ್ಯಕರ್ತೆಯರು ಬೆಂಗಳೂರಿಗೆ ಬಾರದಂತೆ ತಡೆಯಲು ಕಮಿಷನರ್‌ ಅವರೇ ಪ್ರಯತ್ನಿಸುತ್ತಿದ್ದಾರೆ. ಸರ್ಕಾರದ ಪ್ರತಿನಿಧಿ ರೀತಿಯಲ್ಲಿ
ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘1994ರಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮಿಂದ ಜೀವಹಾನಿ ಆಗಿದೆಯಾ? ಆಸ್ತಿ ಹಾನಿ ಆಗಿದೆಯಾ? ದಲಿತ, ವಿಧವೆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಹೋರಾಟ. ಇದನ್ನೇ ಮಾಡಬಾರದು ಎಂದರೆ ಹೇಗೆ’ ಎಂದರು.

ಕಾರ್ಯಕರ್ತೆಯರು ಇದನ್ನು ಮಾಡುವಂತಿಲ್ಲ

* 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ

* ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಯಾವುದೇ ಮೆರವಣಿಗೆ ಹಾಗೂ ಸಭೆ ನಡೆಸುವಂತಿಲ್ಲ

* ಕಾರ್ಯಕರ್ತೆಯರು ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ,
ಚಾಕು ಹಾಗೂ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುವನ್ನು ಒಯ್ಯುವಂತಿಲ್ಲ.

* ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು, ಕ್ಷಿಪಣಿ ಎಸೆಯುವಂತಿಲ್ಲ. ಅವುಗಳನ್ನು
ಸಂಗ್ರಹಿಸುವಂತಿಲ್ಲ.

* ಯಾವುದೇ ವ್ಯಕ್ತಿಯ ಶವದ ಪ್ರತಿಕೃತಿ ಪ್ರದರ್ಶಿಸುವಂತಿಲ್ಲ. ಪ್ರಚೋದನಕಾರಿ ಘೋಷಣೆ ಕೂಗುವಂತಿಲ್ಲ. ಕರಪತ್ರ, ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ.

‘ಪ್ರಜಾಪ್ರಭುತ್ವ ವಿರೋಧಿ ನಡೆ’

‘ಬಿಜೆಪಿ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನಕಾರರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲು ಹುನ್ನಾರ ನಡೆಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಡಿವೈಎಫ್‌ಐ ರಾಜ್ಯ ಸಮಿತಿ ಕಾರ್ಯದರ್ಶಿ ಬಸವರಾಜ ಪೂಜಾರ ಖಂಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು