ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮೀರಿ ಪಾರ್ಟಿ: ನಟ ದರ್ಶನ್‌ ಸೇರಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್‌

Published 8 ಜನವರಿ 2024, 14:21 IST
Last Updated 8 ಜನವರಿ 2024, 14:21 IST
ಅಕ್ಷರ ಗಾತ್ರ

ಬೆಂಗಳೂರು: ಕಾಟೇರ ಸಿನಿಮಾದ ಯಶಸ್ಸು ಸಂಭ್ರಮಿಸಲು ಇಲ್ಲಿನ ಮೈಸೂರ್‌ ಸ್ಯಾಂಡಲ್‌ಸೋಪ್‌ ಫ್ಯಾಕ್ಟರಿ ಬಳಿಯ ಒರಾಯನ್‌ ಮಾಲ್‌ ಎದುರಿನ ‘ಜೆಟ್‌ಲ್ಯಾಗ್‌ ಪಬ್‌’ನಲ್ಲಿ ನಿಯಮ ಉಲ್ಲಂಘಿಸಿ, ಮುಂಜಾನೆವರೆಗೆ ಪಾರ್ಟಿ ಆಯೋಜಿಸಿದ್ದ ಚಿತ್ರರಂಗದ ಎಂಟು ಮಂದಿಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್, ನಟ ‘ನಿನಾಸಂ’ ಸತೀಶ್, ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಅಂಬರೀಷ್‌ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿದೇಶಕ್ಕೆ ತೆರಳಿದ ದರ್ಶನ್‌

ಜ.8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ, ದರ್ಶನ್‌ ಹಾಗೂ ತರುಣ್‌ ಸುಧೀರ್‌ ಸಿನಿಮಾದ ಪ್ರಚಾರಕ್ಕೆ ಜ.4ರಂದೇ ದುಬೈಗೆ ತೆರಳಿದ್ದು, ವಿಚಾರಣೆಗೆ ಹಾಜರಾಗಿಲ್ಲ. ರಾಜರಾಜೇಶ್ವರಿ ನಗರದ ದರ್ಶನ್‌ ಅವರ ಮನೆಗೆ ನೋಟಿಸ್‌ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಯಮ ಉಲ್ಲಂಘನೆ

‘ಜ.3ರಂದು ಒರಿಯನ್‌ ಮಾಲ್‌ನಲ್ಲಿ ಚಿತ್ರರಂಗದ ಗಣ್ಯರಿಗೆ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅದಾದ ಮೇಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಜಗದೀಶ್ ಮಾಲೀಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಆಯೋಜನೆಗೊಂಡಿತ್ತು. ರಾತ್ರಿ 1 ಗಂಟೆವರೆಗೆ ಮಾತ್ರ ಪಾರ್ಟಿಗೆ ಅವಕಾಶವಿತ್ತು. ಆದರೆ, ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮುಂಜಾನೆವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಸ್ಥಳಕ್ಕೆ ತೆರಳಿದ್ದ ಬೀಟ್‌ ಪೊಲೀಸ್‌ ಸಿಬ್ಬಂದಿ ರಾತ್ರಿ 1 ಗಂಟೆಯ ಒಳಗಾಗಿ ಪಾರ್ಟಿ ಪೂರ್ಣಗೊಳಿಸುವಂತೆ ಸೂಚಿಸಿ ತೆರಳಿದ್ದರು. ಆದರೂ, ಮುಂಜಾನೆವರೆಗೂ ಪಾರ್ಟಿ ನಡೆದಿತ್ತು’ ಎಂದು ಮೂಲಗಳು ಹೇಳಿವೆ.

‘ಪಬ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ವ್ಯವಸ್ಥಾಪಕ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಖುದ್ದು ನಟರ ಮನೆಗಳಿಗೆ ನೋಟಿಸ್ ತಲುಪಿಸಿದ್ದಾರೆ. ಅವರ ವಾಟ್ಸ್‌ಆ್ಯಪ್‌ ಸಂಖ್ಯೆಗೂ ನೋಟಿಸ್ ಕಳುಹಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT