ಮಂಗಳವಾರ, ಆಗಸ್ಟ್ 3, 2021
26 °C

ಮುಂಬೈನಿಂದ ಬಂದವರು ಪರಾರಿ; ಕ್ವಾರಂಟೈನ್‌ಗೆ ಬಾರದಿದ್ದರೆ ಕ್ರಿಮಿನಲ್ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬೈನಿಂದ ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಕೆಲ ಪ್ರಯಾಣಿಕರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.

ಕ್ವಾರಂಟೈನ್‌ಗೆ ಹೋಗುವುದಿಲ್ಲವೆಂದು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಪ್ರಯಾಣಿಕರು ಜಗಳ ಮಾಡಿದ್ದರು. ನಂತರ, ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಅವರ ಪತ್ತೆಗೆ ಪಶ್ಚಿಮ ವಿಭಾಗ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ವಯಂಪ್ರೇರಿತವಾಗಿ ಬಂದು ಕ್ವಾರಂಟೈನ್‌ಗೆ ಒಳಪಡುವಂತೆಯೂ ಪೊಲೀಸರು ಕೋರಿದ್ದಾರೆ.

ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, 'ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ 667 ಪ್ರಯಾಣಿಕರು ಬಂದಿದ್ದರು. ಅವರೆಲ್ಲರೂ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸೂಚಿಸಿದ್ದ ಸ್ಥಳದಲ್ಲಿ ಕ್ವಾರಂಟೈನ್ ಇರಬೇಕಿತ್ತು. ಆದರೆ, ಕೆಲವರು ಪರಾರಿಯಾಗಿದ್ದಾರೆ' ಎಂದರು.

'ಹೊರ ರಾಜ್ಯದಿಂದ ಬಂದವರಿಂದಲೇ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ, ಹೊರ ರಾಜ್ಯದಿಂದ ಯಾರೇ ಬಂದರೂ ಅವರಿಗೆ ಕ್ವಾರಂಟೈನ್ ಮಾಡಲು ಸರ್ಕಾರದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ' ಎಂದರು.

'ರೈಲಿನಲ್ಲಿ ಬಂದವರ ಮೇಲೆ ಲಾಠಿ ಬೀಸಿ, ಅವರನ್ನು ಬೆನ್ನಟ್ಟಿ ಕ್ವಾರಂಟೈನ್‌ಗೆ ಕಳುಹಿಸಲು ಆಗುವುದಿಲ್ಲ. ಆ ರೀತಿ ಮಾಡಿದರೆ ಅವರ ಮರ್ಯಾದೆ ಹೋಗುತ್ತದೆ. ಅವರೇ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಅವರೆಲ್ಲ ಕ್ವಾರಂಟೈನ್‌ಗೆ ಬರಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು' ಎಂದೂ ಭಾಸ್ಕರ್ ರಾವ್ ಎಚ್ಚರಿಸಿದರು.

'ರೈಲಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಮಾಹಿತಿ ಆಧರಿಸಿ ವಿಳಾಸ ಪತ್ತೆ ಮಾಡಲಾಗುತ್ತಿದೆ' ಎಂದೂ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು