ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಬೇಡ- ಡಿಕೆಶಿಗೆ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು

ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಕೋವಿಡ್‌ ನಿಯಂತ್ರಣ ಸಾಧ್ಯ
Last Updated 20 ಏಪ್ರಿಲ್ 2021, 11:14 IST
ಅಕ್ಷರ ಗಾತ್ರ

ಬೆಂಗಳೂರು: 'ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಎಲ್ಲರೂ ಸೇರಿ ಕೆಲಸ ಮಾಡಿದರೂ ಕೋವಿಡ್ ಎದುರಿಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವಾಗ ತಪ್ಪು ಕಂಡುಹಿಡಿಯುವುದಕ್ಕೆ ಹೋಗಬೇಡಿ. ಕೋವಿಡ್ ನಿಯಂತ್ರಿಸುವಲ್ಲಿ ಸಫಲತೆ ಕಾಣಬೇಕಾದರೆ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯ’ ಎಂದರು.

‘ರಾಜ್ಯಪಾಲರು ಕೋವಿಡ್ ವಿಚಾರದಲ್ಲಿ ಕರೆದಿರುವ ಸಭೆಯನ್ನು ರಾಜ್ಯಪಾಲರ ಆಡಳಿತಕ್ಕೆ ಡಿ. ಕೆ. ಶಿವಕುಮಾರ್ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದಾಗ ಈ ರೀತಿ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸಮಂಜಸ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಜ್ಯಪಾಲರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ, ವಿರೋಧ ಪಕ್ಷಗಳ ನಾಯಕರು, ಉಭಯ ಸದನಗಳ ಮುಖಂಡರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿ ಎಲ್ಲ ರಾಜ್ಯಗಳ ರಾಜ್ಯಪಾಲರ ಜತೆಗೂ ಮಾತನಾಡಿದ್ದಾರೆ. ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳ ರಾಜ್ಯಪಾಲರ ಜತೆಗೂ ಮಾತನಾಡಿದ್ದಾರೆ. ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದವರ ಜೊತೆ ಮಾತನಾಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಅವರನ್ನು ಎದುರಿಸಿ ಎಂದು ಸಲಹೆ ನೀಡಿದ್ದಾರೆ’ ಎಂದರು.

‘ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿಯ ರಾಜ್ಯಪಾಲರು ಸಭೆ ನಡೆಸಿದರೆ ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ ಎಂದು ಹೇಳುವುದಕ್ಕೆ ಆಗುತ್ತದೆಯೇ?, ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಅಲ್ಲಿನ ರಾಜ್ಯಪಾಲರು ಸಭೆ ನಡೆಸಿದರೆ ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಲು ಸಾಧ್ಯವೇ.? ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ರಾಜಕಾರಣ ಮಾಡುವುದು ಮಾಡುವುದು ಸರಿಯಲ್ಲ’ ಎಂದರು.

ಕೋವಿಡ್ ಎರಡನೆಯ ಅಲೆ ಅತಿ ವೇಗವಾಗಿ ಹರಡುತ್ತಿದೆ. ಕೇವಲ ಮೂರು ವಾರಗಳಲ್ಲಿ ಅತಿವೇಗವಾಗಿ ಹರಡಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ಅದರೆ, ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರಿನಲ್ಲಿ ಸಮಸ್ಯೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT