ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ತಿಳಿವಳಿಕೆ ಇಲ್ಲದ ಅಧಿಕಾರಿಗಳಿಗೆ ಚವ್ಹಾಣ ತರಾಟೆ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪಶು ವೈದ್ಯರಿಗೆ ಸಚಿವರಿಂದ ಪಾಠ
Last Updated 5 ಜನವರಿ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಸಚಿವನಾದ ಬಳಿಕ ಮಾಡಿರುವ ಸಾಧನೆ ಏನು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು ಯಾವಾಗ, ಇಲಾಖೆಯ ಸಹಾಯವಾಣಿ ಸಂಖ್ಯೆ ಎಷ್ಟು’ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಪಶು ವೈದ್ಯರು ಮತ್ತು ಅಧಿಕಾರಿಗಳನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ತರಾಟೆಗೆ ತೆಗೆದುಕೊಂಡರು.

ಹೆಬ್ಬಾಳದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಸನ್ಮಾನ ಸ್ವೀಕರಿಸಿದ ಸಚಿವರು, ‘ಗೋಹತ್ಯೆ ನಿಷೇಧ ಕಾಯ್ದೆಯನ್ನು ಒಂದು ವರ್ಷದ ಹಿಂದೆಯೇ ಜಾರಿಗೆ ತರಲಾಗಿದೆ. ಅದಕ್ಕೂ ಮುನ್ನವೇ ಗೋಹತ್ಯೆ ನಿಷೇಧ ಕಾಯ್ದೆ ಇತ್ತು. ಅದನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಗಿದೆ, ಎರಡೂ ಕಾಯ್ದೆಗಳಿಗೆ ಇರುವ ವ್ಯತ್ಯಾಸ ಏನು, ಶಿಕ್ಷೆ ಮತ್ತು ದಂಡದ ಪ್ರಮಾಣ ಎಷ್ಟು’ ಎಂದು ಪ್ರಶ್ನೆ ಮಾಡಿದರು.

‍ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು, ಉಪನಿರ್ದೇಶಕರು ಸೇರಿ ಯಾರೊಬ್ಬರೂ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ‘ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಯ್ದೆಗಳ ಬಗ್ಗೆ ಮಾಹಿತಿಯೇ ಇಲ್ಲದಿದ್ದರೆ ಇಲಾಖೆ ನಡೆಸುವುದು ಹೇಗೆ, ಈ ರೀತಿಯ ಬೇಜವಾಬ್ದಾರಿ ಸಹಿಸುವುದಿಲ್ಲ’ ಎಂದರು.

‘ಬೆಂಗಳೂರಿನಲ್ಲೇ ಹೆಚ್ಚು ಅನಧಿಕೃತ ಕಸಾಯಿಖಾನೆಗಳಿವೆ. ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಿಮಗೇ ತಿಳಿವಳಿಕೆ ಇಲ್ಲದಿದ್ದರೆ, ನಿಮ್ಮಂತವರನ್ನು ಕಟ್ಟಿಕೊಂಡು ಗೋಮಾತೆಯನ್ನು ಉಳಿಸುವುದು ಹೇಗೆ? ಗುರುವಾರ ದಿನವಿಡೀ ತರಬೇತಿ ಕಾರ್ಯಾಗಾರ ಆಯೋಜಿಸಬೇಕು.ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಊಟವನ್ನು ನಾನೇ ಕಳಿಸಿಕೊಡುತ್ತೇನೆ. ಕಾರ್ಯಕ್ರಮ ನಡೆಸಿರುವ ಚಿತ್ರಗಳನ್ನು ನನ್ನ ವಾಟ್ಸ್‌ಆ್ಯಪ್‌ ನಂಬರ್‌ಗೆ ಕಳುಹಿಸಬೇಕು’ ಎಂದು ಉಪ ನಿರ್ದೇಶಕ ಡಾ. ಉಮಾಪತಿ ಅವರಿಗೆ ಸೂಚನೆ ನೀಡಿದರು.

‘ಇಲಾಖೆಯ ಸಹಾಯವಾಣಿ ಸಂಖ್ಯೆ ಬಗ್ಗೆಯೂ ಕೆಲವರಿಗೆ ಗೊತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ಯಾರೊಬ್ಬರೂ ವಾಸವಿಲ್ಲ. ರಾಜಧಾನಿಯಲ್ಲಿ ಕುಳಿತು ಸರ್ಕಾರದ ಸಂಬಳ ಪಡೆದು ಕಾಲಹರಣ ಮಾಡುತ್ತಿದ್ದೀರಿ. ಇದು ಮೊದಲ ಸಭೆ ಎನ್ನುವ ಕಾರಣಕ್ಕೆ ವಿನಾಯಿತಿ ನೀಡುತ್ತಿದ್ದೇನೆ. ಮುಂದಿನ ಸಭೆಯಲ್ಲಿ ಇಲಾಖೆ ಬಗ್ಗೆ ತಿಳಿದುಕೊಳ್ಳದೆ ಸಭೆಗೆ ಬಂದು ನಿಂತರೆ ಮುಲಾಜಿಲ್ಲದೆ ಅಮಾನತು ಮಾಡುತ್ತೇನೆ. ಎಷ್ಟು ವರ್ಷದಿಂದ ಬೆಂಗಳೂರಿನಲ್ಲೇ ಇದ್ದೀರಿ ಎಂಬ ವಿವರ ಪಡೆದು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡುತ್ತೇನೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT