ಬುಧವಾರ, ಸೆಪ್ಟೆಂಬರ್ 30, 2020
20 °C
ಕಬ್ಬನ್ ಪಾರ್ಕ್‍ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಸುಸಜ್ಜಿತ ಗ್ರಂಥಾಲಯ ಭವನ ನಿರ್ಮಾಣ: ಸಚಿವ ಸುರೇಶ್ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಕಬ್ಬನ್ ಪಾರ್ಕ್‍ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತವಾದ ಶತಮಾನೋತ್ಸವ ಗ್ರಂಥಾಲಯ ಭವನ ನಿರ್ಮಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ನೂತನ ಗ್ರಂಥಾಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಇತರೆ ರಾಜ್ಯಗಳಲ್ಲಿ ಇರುವ ಗ್ರಂಥಾಲಯ ವ್ಯವಸ್ಥೆ ಪರಿಶೀಲಿಸಿ, ಎಲ್ಲ ವರ್ಗದ ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಶತಮಾನೋತ್ಸವ ಗ್ರಂಥಾಲಯ ನಿರ್ಮಿಸಲಾಗುವುದು’ ಎಂದರು.

ಗ್ರಂಥಾಲಯದೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡ ಸಚಿವರು, ‘ನಾನೇನಾದರೂ ಸಾಧನೆ ಮಾಡಿದ್ದಾದರೆ ಅದರ ಶ್ರೇಯಸ್ಸು ಸಾರ್ವಜನಿಕ ಗ್ರಂಥಾಲಯಕ್ಕೆ ಸೇರಬೇಕು. ಗ್ರಂಥಾಲಯದ ಓದಿನ ಮೂಲಕವೇ ನಾನು ಕಾನೂನು ಪದವಿ ಪಡೆಯುವಂತಾಯಿತು. ಗ್ರಂಥಾಲಯ ಎಂಬುದು ಶ್ರೀಸಾಮಾನ್ಯನ ಒಂದು ವಿಶ್ವವಿದ್ಯಾಲಯ ಇದ್ದಂತೆ’ ಎಂದರು.

‘ಆರು ತಿಂಗಳ ಅವಧಿಯಲ್ಲಿ ರಾಜ್ಯದೆಲ್ಲೆಡೆ 272 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭಗೊಂಡಿದ್ದು,ಚರಾಜ್ಯದಾದ್ಯಂತ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆ್ಯಪ್‌ ಲೋಕಾರ್ಪಣೆಗೊಳಿಸಿದೆ. ಅದನ್ನು ಮೂರು ಲಕ್ಷಕ್ಕೂ ಹೆಚ್ಚು ಜನರುಚಬಳಸುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಈ ಆ್ಯಪ್‍ನಲ್ಲಿ ಲಭ್ಯವಿವೆ’ ಎಂದರು.

‘ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯದಾದ್ಯಂತ 6,841 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳು ಅಗತ್ಯ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಸಚಿವರು ತಿಳಿಸಿದರು. ಡಿಜಿಟಲ್ ಗ್ರಂಥಾಲಯವನ್ನು ಸಚಿವರು ಉದ್ಘಾಟಿಸಿದರು.

ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ವಿಧಾನಸಭೆ ಸದಸ್ಯರಾದ ಸೌಮ್ಯಾರೆಡ್ಡಿ, ಬಿಬಿಎಂಪಿ ಸದಸ್ಯ ದೇವದಾಸ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ ಕುಮಾರ ಎಸ್. ಹೊಸಮನಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು