ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ವೈ.ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ಕಿಡಿ

ಜಾಲತಾಣದಲ್ಲಿ ಹರಿದಾಡಿದ ವಿಡಿಯೊ l ಸೋಮಣ್ಣ ಜತೆ ಬಿಜೆಪಿ ನಾಯಕರ ಮಾತುಕತೆ
Last Updated 14 ಮಾರ್ಚ್ 2023, 22:51 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.

ನಗರದ ಮೂಡಲಪಾಳ್ಯದ ಕುರುಬರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ನಮ್ಮ ಪಕ್ಷದಲ್ಲಿ ಬಹಳ ಹಿರಿಯ ನಾಯಕರೊಬ್ಬರಿದ್ದಾರೆ. ಅವರು ತಮ್ಮ ಸೀಟನ್ನು ತ್ಯಾಗ ಮಾಡಿ, ಈಗ ತಮ್ಮಮಗನನ್ನು ಕೂರಿಸುತ್ತಿದ್ದಾರೆ. ಕರ್ನಾಟಕಕ್ಕೆ ಮುಂದಿನ ನಾಯಕ ಎಂದು ಹೇಳುತ್ತಿದ್ದಾರೆ. ಆತನಿಗೆ ಫೋನ್ ಮಾಡಿದರೆ ಏಕ ವಚನದಲ್ಲಿ ಮಾತನಾಡುವ ಮಹಾ ಪುರುಷ. ನನಗೂ ಹೀಗೆ ಮಾತನಾಡಲು ಬಂದಾಗ, ನಾನೂ ಏಕ ವಚನದಲ್ಲಿ ಮಾತನಾಡಿದೆ’ ಎಂದು ವಿಜಯೇಂದ್ರ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಅಲ್ಲದೇ, ವಿ.ಸೋಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆ ಕುಳಿತು ಮಾತನಾಡಿರುವ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬಿಜೆಪಿಯ ಹಿರಿಯ ನಾಯಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋಮಣ್ಣ ಜತೆ ಮಾತುಕತೆ ನಡೆಸಿ, ಅವರ ಮುನಿಸನ್ನು ಶಮನ ಮಾಡಿದರು. ಬಿಜೆಪಿಯಲ್ಲೇ ಉಳಿಯುವುದಾಗಿ ನಾಯಕರಿಗೆ ಹೇಳಿದರೆಂದು ಮೂಲಗಳು ತಿಳಿಸಿವೆ.

ತಂದೆಗೆ ಅವಮಾನ ಆದ್ರೆ ಸಹಿಸಲ್ಲ: ಈ ಎಲ್ಲ ಬೆಳವಣಿಗೆಯ ಬಳಿಕ ಅರುಣ್ ಸೋಮಣ್ಣ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೊವನ್ನು ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ವಿಡಿಯೊ ಹಿಂದೆ ಕೃಷ್ಣಪ್ಪ ಮತ್ತು ಅವರ ಮಗ ಇರಬಹುದು’ ಎಂದು ತಿಳಿಸಿದರು.

‘ಪಕ್ಷಕ್ಕೆ ಸೋಮಣ್ಣ ಅವರ ಕೊಡುಗೆ ದೊಡ್ಡದು. ನನ್ನ ತಂದೆಗೆ ಅವಮಾನ ಆದ್ರೆ ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡಿದ್ದೇನೆ. 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರ ಸೋಲಿಗೆ ಕಾರಣರು ಯಾರು? ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಇಲ್ಲಿ ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಮುಖ್ಯವಲ್ಲ’ ಎಂದರು.

‘ಸೋಮಣ್ಣ ಅವರಿಗೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹಲವು ಚುನಾವಣೆಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಒಂದು ಚುನಾವಣೆ ಗೆದ್ದ ತಕ್ಷಣ ರಾಜಾಹುಲಿ, ಅವರ ಮಗ ಮರಿಹುಲಿ ಎಂದು ಕರೆದರೆ ಹೇಗೆ. ಚುನಾವಣೆಯಲ್ಲಿ ಎಲ್ಲರ ಪಾತ್ರವೂ ಇರುತ್ತದೆ. ನನಗೂ ವಿಜಯೇಂದ್ರ ಅವರಿಗೂ ವೈಯಕ್ತಿಕ ದ್ವೇಷ ಇಲ್ಲ. ನಮ್ಮನ್ನು ತುಳಿಯಲು ಬಂದರೆ ಸುಮ್ಮನಿರಲು ಸಾಧ್ಯವಿಲ್ಲ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಮುನಿಸು ತಣಿಸಿದ ಅಶೋಕ: ವಿ.ಸೋಮಣ್ಣ ಅವರ ಮುನಿಸು ತಣಿಸಲು ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದರು. ಆ ಪ್ರಕಾರ, ಅಶೋಕ ಅವರು ಸೋಮಣ್ಣ ಜತೆ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.

‘ಬಿಜೆಪಿಯಲ್ಲೇ ಮುಂದುವರಿಯುವೆ’
‘ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ, ಇಲ್ಲವಾದರೆ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡಿರುವೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷ ತ್ಯಜಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಜತೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೊ ಹರಿಯಬಿಟ್ಟು ವದಂತಿ ಹಬ್ಬಿಸಲಾಗಿದೆ’ ಎಂದು ಕಣ್ಣೀರು ಹಾಕಿದರು.

‘ಬಿಜೆಪಿಯಲ್ಲಿ ನನಗೆ ಯಾವ ಅಸಮಾಧಾನವೂ ಇಲ್ಲ. ಯಾವುದೇ ನಾಯಕರು ಅಗೌರವ ಆಗುವ ರೀತಿ ನಡೆದುಕೊಂಡಿಲ್ಲ. ನಾನು ಕೂಡ ಪಕ್ಷಕ್ಕೆ ಮುಜುಗರ ಆಗುವಂತೆ ವರ್ತಿಸಿಲ್ಲ. ನನಗೆ ಅವಮಾನ ಆಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ನಾನು ಯಾರ ಮುಲಾಜಿನಲ್ಲೂ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ’ ಎಂದರು.

‘ಡಬಲ್‌ ಸ್ಟ್ಯಾಂಡರ್ಡ್‌ ರಾಜಕಾರಣ ನನಗೆ ಗೊತ್ತಿಲ್ಲ. ಪಿಗ್ಮಿ ಸಂಗ್ರಹಿಸಿ, ಕಸ್ತೂರಿ ಮಾತ್ರೆ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಿದ್ದೇನೆ. ರಾಜಕೀಯದಲ್ಲಿ ಅವಕಾಶ ಸಿಕ್ಕಾಗ ಜನರ ಕೆಲಸ ಮಾಡಿದ್ದೇನೆ. ರಾತ್ರಿ ಕೆಲಸ ಮಾಡಿ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಖಳನಾಯಕನಂತೆ ಬಿಂಬಿಸಬೇಡಿ. ವದಂತಿಗಳಿಗೆ ತುಪ್ಪ ಸುರಿದು ತೇಜೋವಧೆ ಮಾಡಬೇಡಿ’ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದರು.

‘ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಟಿಕೆಟ್‌ ಕೊಟ್ಟರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಹಲವು ಕ್ಷೇತ್ರಗಳ ಉಪ ಚುನಾವಣೆಯ ಜವಾಬ್ದಾರಿಯನ್ನು ಪಕ್ಷದ ನಾಯಕರು ನನಗೆ ವಹಿಸಿದ್ದರು. ಎಲ್ಲ ಕಡೆಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದೇನೆ. ನನ್ನ ಇತಿಮಿತಿಗಳು ಗೊತ್ತಿವೆ’ ಎಂದರು.

‘ಬಿ.ಎಸ್. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಬಿಜೆಪಿ ಸೇರಿದ ಬಳಿಕ ಚುನಾವಣೆಯಲ್ಲಿ ಸೋತಿದ್ದೆ. ಆದರೂ ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿ ಮಂತ್ರಿ ಸ್ಥಾನದಲ್ಲಿ ಮುಂದುವರಿಸಿದರು. ಅವರನ್ನು ಎಂದಿಗೂ ಮರೆಯುವುದಿಲ್ಲ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಆತ್ಮೀಯ ಸ್ನೇಹಿತರು’ ಎಂದ ಸೋಮಣ್ಣ, ಎಚ್‌.ಡಿ. ದೇವೇಗೌಡರ ಗುಣಗಾನವನ್ನೂ ಮಾಡಿದರು.

‘ತಪ್ಪು ಮಾತನಾಡಿದ್ದರೆ ಕ್ರಮ ಜರುಗಿಸಲಿ’
ಮಗ ಡಾ. ಅರುಣ್‌ ಸೋಮಣ್ಣ ಬಿಜೆಪಿ ನಾಯಕರ ವಿರುದ್ಧ ಮಾತನಾಡಿರುವ ಬಗ್ಗೆ ಪ್ರಶ್ನಿಸಿದಾಗ, ‘ನನ್ನ ಮಗ ಏನು ಹೇಳಿಕೆ ನೀಡಿದ್ದಾನೆ ಎಂಬುದು ಗೊತ್ತಿಲ್ಲ. ಪಕ್ಷದ ವಿರುದ್ಧ ಆತ ಮಾತನಾಡಿದ್ದರೆ ಕ್ರಮ ಜರುಗಿಸಬಹುದು’ ಎಂದು ಸೋಮಣ್ಣ ಉತ್ತರಿಸಿದರು. ಮಗನಿಗೆ ಟಿಕೆಟ್‌ ನೀಡುವುದು ಬಿಜೆಪಿ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT