ಮಂಗಳವಾರ, ಡಿಸೆಂಬರ್ 7, 2021
20 °C

ಮೆಟ್ರೊ ಸಂಚಾರ ಅವಧಿ ವಿಸ್ತರಣೆಗೆ ಸಚಿವರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಸೇವೆಯ ಅವಧಿಯನ್ನು ರಾತ್ರಿ 8 ಗಂಟೆ ಬಳಿಕವೂ ವಿಸ್ತರಿಸಬೇಕು ಎಂಬ ಬೇಡಿಕೆಗೆ ಸಚಿವರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘11 ಗಂಟೆವರೆಗೂ ವಿಸ್ತರಿಸಬೇಕು’

ರಾತ್ರಿ ಕರ್ಫ್ಯೂ 9 ಗಂಟೆವರೆಗೆ ಇದೆ. ಅಲ್ಲಿಯವರೆಗೆ ಅಂಗಡಿ ಮಳಿಗೆಗಳು, ಹೋಟೆಲ್‌ಗಳು ತೆರೆದೇ ಇರುತ್ತವೆ. ಇಂತಹ ಕಡೆ ಕೆಲಸ ಮಾಡುವ ಬಡವರು ಮನೆ ತಲುಪಲು ಸಮಸ್ಯೆ ಆಗುತ್ತಿದೆ. ಮೆಟ್ರೊ ಸೇವೆಯನ್ನು ರಾತ್ರಿ 8 ಗಂಟೆಗೆ ಸ್ಥಗಿತಗೊಳಿಸುವುದು ಅವೈಜ್ಞಾನಿಕ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯನ್ನು ರಾತ್ರಿ 11 ಗಂಟೆ ವರೆಗೆ ವಿಸ್ತರಿಸಿದರೆ ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಾನು ಚರ್ಚಿಸುತ್ತೇನೆ. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ.

ವಿ.ಸೋಮಣ್ಣ, ವಸತಿ ಸಚಿವ

***

‘ಸಿ.ಎಂ ಜತೆ ಸಮಾಲೋಚಿಸುವೆ’

ರಾತ್ರಿ 8 ಗಂಟೆಗೆ ಮೆಟ್ರೊ ಸೇವೆ ಸ್ಥಗಿತಗೊಳ್ಳುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಅವಧಿ ವಿಸ್ತರಣೆಗೆ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.

ಆರ್.ಅಶೋಕ, ಕಂದಾಯ ಸಚಿವ

***

‘ಮಧ್ಯಮ ವರ್ಗದ ಜನರಿಗೆ ಸಮಸ್ಯೆ’

ಎಂಟು ಗಂಟೆಗೆ ಮೆಟ್ರೊ ಸೇವೆ ಸ್ಥಗಿತವಾಗುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ
ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ, ಸಂಚಾರದ ಅವಧಿಯನ್ನು ವಿಸ್ತರಿಸುವ ಅಗತ್ಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡುತ್ತೇನೆ.

ಮುನಿರತ್ನ, ತೋಟಗಾರಿಕಾ ಸಚಿವ

***

ಬಿಎಂಆರ್‌ಸಿಎಲ್‌ ಜೊತೆ ಪಿ.ಸಿ ಮೋಹನ್‌ ಚರ್ಚೆ

ಸಂಸದ ಪಿ.ಸಿ.ಮೋಹನ್‌ ಅವರು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರನ್ನು ಗುರುವಾರ ಭೇಟಿ ಮಾಡಿ ಮೆಟ್ರೊ ಸೇವೆಯ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದರು.

‘ರಾತ್ರಿ 9 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹಾಗಾಗಿ ಮೆಟ್ರೊ ಸೇವೆಯನ್ನು ರಾತ್ರಿ 8ಕ್ಕೆ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅಂಜುಂ ಪರ್ವೇಜ್‌ ತಿಳಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಅವರಿಗೆ ವಿವರಿಸಿದ್ದೇನೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ. ಮೆಟ್ರೊ ಸೇವೆಯ ಅವಧಿ ವಿಸ್ತರಣೆ ಶೀಘ್ರವೇ ಕಾರ್ಯಗತವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು