ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ನಾರಾಯಣ ನೇತ್ರಾಲಯಕ್ಕೆ ಸ್ಥಳಾಂತರ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ
Last Updated 17 ಜುಲೈ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯದಿಂದಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 13 ಮಂದಿಯಲ್ಲಿ ಐವರನ್ನು ನಾರಾಯಣ ನೇತ್ರಾಲಯಕ್ಕೆ ಬುಧವಾರ ಸ್ಥಳಾಂತರ ಮಾಡಲಾಗಿದೆ.

ಔಷಧ ಪರಿಣಾಮದಿಂದ ಶಸ್ತ್ರಚಿಕಿತ್ಸೆಗೆ ಒಳಪಟ್ಟ 23 ಮಂದಿಯಲ್ಲಿ ಇಬ್ಬರಿಗೆ ಮಾತ್ರ ದೃಷ್ಟಿ ದೋಷ ಸಮಸ್ಯೆ ನಿವಾರಣೆಯಾಗಿದ್ದು, ಉಳಿದವರ ಮೇಲೆ ಅಂಧಕಾರದ ಛಾಯೆ ಆವರಿಸಿದೆ. ಗಂಭೀರ ಸಮಸ್ಯೆ ಎದುರಿಸುತ್ತಿದ್ದ ಐವರನ್ನು ಹೆಚ್ಚಿನ ಚಿಕಿತ್ಸೆಗೆ ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗಿದೆ.

‘ಸುಜಾತ, ಪುಟ್ಟನಂಜಮ್ಮ, ಕೈಸರ್ ಸೇರಿದಂತೆ ಐದು ಮಂದಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಪ್ರಕರಣ ಗಂಭೀರವಾಗಿದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ ಬಂದ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಐದು ಮಂದಿಯಲ್ಲಿ ಮೂವರ ಆರೋಗ್ಯ ಸಮತೋಲನದಲ್ಲಿದೆ. ಹಾಗಾಗಿ ಬುಧವಾರ ಒಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

‘ಗುರುವಾರ ಇನ್ನಿಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧಿರಿಸಿದ್ದೇವೆ. ಒಂದೇ ಕಣ್ಣಿಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಯುವುದರಿಂದ ಈ ಪ್ರಕರಣ ವೈದ್ಯರಿಗೆ ಕೂಡ ಸವಾಲಾಗಿದೆ’ ಎಂದರು.

ದೂರು ದಾಖಲು: ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಕುಟುಂಬದ ಸದಸ್ಯರು ಕರ್ನಾಟಕ ವೈದ್ಯಕೀಯ ಪರಿಷತ್ತಿಗೂ ದೂರು ನೀಡಿದ್ದಾರೆ.

‘ರೋಗಿಗಳ ಈ ಸ್ಥಿತಿಗೆ ಆಸ್ಪತ್ರೆ ವೈದ್ಯರೇ ಕಾರಣವಾಗಿದ್ದು, ಅನುಭವವಿಲ್ಲದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರವ ಸಾಧ್ಯತೆಯಿದೆ. ಈ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರುನ್ನು ಸೇವೆಯಿಂದ ವಜಾಗೊಳಿಸಿ, ನಮಗೆ ನ್ಯಾಯ ಕೊಡಿಸಬೇಕು. ಮುಂದೆ ಯಾರಿಗೂ ಹೀಗೆ ಆಗದಂತೆ ಎಚ್ಚರವಹಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಂಧರಾದ ಜನರು: ತನಿಖೆಗೆ ಆಗ್ರಹ

ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ 23 ಮಂದಿ ಅಂಧರಾಗಿದ್ದು, ಕೂಡಲೇ ಪರಿಹಾರ ನೀಡುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇಲ್ಲಿ ಬುಧವಾರ ಆಗ್ರಹಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮಿಂಟೊ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪೊರೆ ಶಸ್ತ್ರ ಚಿಕಿತ್ಸೆಗೆ ಒಳಗಾದವರು ದೃಷ್ಟಿ ಕಳೆದುಕೊಂಡು ಶಾಶ್ವತ ಅಂಧತ್ವಕ್ಕೆ ತುತ್ತಾಗಿದ್ದಾರೆ. ಆದರೆ ಯಾವ ಸಚಿವರೂ ಭೇಟಿ ನೀಡಿ ಪರಿಶೀಲಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ. ಸರ್ಕಾರವೇ ದೃಷ್ಟಿ ಕಳೆದುಕೊಂಡಿದೆ’ ಎಂದು ಟೀಕಿಸಿದರು.

ಬೆದರಿಕೆ: ಅತೃಪ್ತ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ಕಾಂಗ್ರೆಸ್‌ನ ಕೆಲವು ನಾಯಕರು ವಿಪ್ ಜಾರಿ ನೆಪದಲ್ಲಿ ಶಾಸಕರನ್ನು ಬೆದರಿಸುತ್ತಿದ್ದಾರೆ. ಸರ್ಕಾರ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

***

ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದರೂ ಚಿಕಿತ್ಸೆ ಮುಂದುವರೆಸಿದ್ದೇವೆ. ನಮ್ಮದು ಯಾವುದೇ ತಪ್ಪಿಲ್ಲ. ಎರಡನೇ ಅಭಿಪ್ರಾಯ ಪಡೆದುಕೊಳ್ಳಲು ನಾರಾಯಣ ನೇತ್ರಾಲಯಕ್ಕೆ 5 ಮಂದಿಯನ್ನು ಕಳುಹಿಸಲಾಗಿದೆ

–ಡಾ. ಸುಜಾತಾ ರಾಥೋಡ್, ಮಿಂಟೊ ಆಸ್ಪತ್ರೆ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT