ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಕಳೆದುಕೊಂಡವರು: ಪೊಲೀಸರಿಗೂ ‘ದಾರಿ ಕಾಣದ’ ಸ್ಥಿತಿ

Last Updated 21 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಣ್ಣು ಕಳೆದುಕೊಂಡವರ ಕುಟುಂಬದ ಸದಸ್ಯರು ಮಿಂಟೊ ಆಸ್ಪತ್ರೆ ವಿರುದ್ಧ ವಿ.ವಿ.ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಲೋಪಕ್ಕೆ ಸಂಬಂಧಿಸಿದ ವಿಶೇಷ ಪ್ರಕರಣ ಇದಾಗಿರುವುದರಿಂದ, ಯಾವ ರೀತಿಯಲ್ಲಿ ತನಿಖೆ ನಡೆಸಬೇಕೆಂಬ ಗೊಂದಲ ಪೊಲೀಸರನ್ನು ಕಾಡುತ್ತಿದೆ.

ಬೊಮ್ಮನಹಳ್ಳಿ ಸಮೀಪದ ಐಟಿಐ ಲೇಔಟ್‌ ನಿವಾಸಿ ರುದ್ರೇಶ್ ಅವರ ಕಣ್ಣಲ್ಲಿ ಪೊರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಜುಲೈ 6ರಂದು ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 9ರಂದು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಅದಾಗಿ ಏಳು ದಿನವಾದರೂ ಅವರಿಗೆ ಕಣ್ಣಿನ ದೃಷ್ಟಿ ಬಂದಿಲ್ಲ.

ಪತಿಯ ಯಾತನೆ ಕಂಡು ಮರುಗುತ್ತಿರುವ ಪತ್ನಿ ಸುಜಾತಾ, ‘ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಪತಿ ರುದ್ರೇಶ್ ಸೇರಿದಂತೆ 13 ರೋಗಿಗಳಿಗೆ ಇದುವರೆಗೂ ದೃಷ್ಟಿ ಬಂದಿಲ್ಲ’ ಎಂದು ಮಿಂಟೊ ಆಸ್ಪತ್ರೆ ವೈದ್ಯರ ವಿರುದ್ಧ ವಿ.ವಿ.ಪುರ ಠಾಣೆಗೆ ಇದೇ 16ರಂದು ದೂರು ನೀಡಿದ್ದಾರೆ.

ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಲಭ್ಯವಾಗುತ್ತಿರುವ ವೈದ್ಯಕೀಯ ಪುರಾವೆಗಳನ್ನು ಪರಿಶೀಲಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಕೆಲ ವೈದ್ಯಕೀಯ ಪದಗಳು ಹಾಗೂ ಅವುಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ.

‘ಇದೇ ಮೊದಲ ಬಾರಿಗೆ ಇಂಥ ಪ್ರಕರಣ ವರದಿಯಾಗಿದ್ದು, ಕಾನೂನು ತಜ್ಞರ ಸಲಹೆ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಆಳಕ್ಕೆ ಇಳಿದು ತನಿಖೆ ಮಾಡುವಷ್ಟು ತಜ್ಞರು ನಾವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಪಡೆದವರೇ ಆ ಕೆಲಸ ಮಾಡಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ದೂರುಗಳ ತನಿಖೆ ನಡೆಸಲು ‘ಕರ್ನಾಟಕ ವೈದ್ಯಕೀಯ ಮಂಡಳಿ’ ಇದೆ. ನ್ಯಾಯಾಂಗದ ಅಧಿಕಾರವೂ ಈ ಮಂಡಳಿಗೆ ಇದೆ. ಮಿಂಟೊ ಆಸ್ಪತ್ರೆ ವಿರುದ್ಧದ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ, ತಜ್ಞರ ಸಮಿತಿಯೊಂದನ್ನು ರಚಿಸಿರುವುದು ಗೊತ್ತಾಗಿದೆ’ ಎಂದರು.

‘ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುವ ಕೆಲಸ ನಡೆದಿದೆ. ವಾರದೊಳಗೆ ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿ, ತಜ್ಞರ ಸಮಿತಿಗೆ ಸಲ್ಲಿಸಲಾಗುವುದು’ ಎಂದು ಅಧಿಕಾರಿ ವಿವರಿಸಿದರು.

‘ರೋಗಿಗಳು, ವೈದ್ಯರು, ಸಹಾಯಕರು, ಔಷಧಿ ತಯಾರಿಕಾ ಕಂಪನಿಯವರನ್ನು ತಜ್ಞರ ಸಮಿತಿಯ ಸದಸ್ಯರು ವಿಚಾರಣೆ ನಡೆಸಲಿದ್ದಾರೆ. ತಪ್ಪಿತಸ್ಥರು ಯಾರು ಎಂಬುದನ್ನು ತೀರ್ಮಾನಿಸಿ ಸಮಗ್ರ ವರದಿ ಸಿದ್ಧಪಡಿಸಲಿದ್ದಾರೆ. ಅದನ್ನು ಆಧರಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕೈದು ತಿಂಗಳು ಬೇಕಾಗಬಹುದು’ ಎಂದು ತಿಳಿಸಿದರು.

‘ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು ಹಾಗೂ ಸಹಾಯಕರು ಯಾರು ಎಂಬ ಮಾಹಿತಿ ನೀಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ನೋಟಿಸ್‌ ನೀಡಲಾಗಿದೆ. ಮಾಹಿತಿ ನೀಡಲು ಎರಡು ದಿನ ಕಾಲಾವಕಾಶ ಪಡೆದಿದ್ದಾರೆ. ಮಾಹಿತಿ ನಮ್ಮ ಕೈ ಸೇರುತ್ತಿದ್ದಂತೆ, ವೈದ್ಯರು ಹಾಗೂ ಸಹಾಯಕರನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆಯಲಾಗುವುದು. ಆ ಹೇಳಿಕೆಗಳನ್ನೂ ಪ್ರಾಥಮಿಕ ವರದಿಯೊಂದಿಗೆ ಲಗತ್ತಿಸಲಾಗುವುದು’ ಎಂದುತಿಳಿಸಿದರು.

ಖಾಸಗಿಯಲ್ಲೂ ಎಡವಟ್ಟು

‘ನಗರದ ಕೆಲ ಖಾಸಗಿ ಆಸ್ಪತ್ರೆಯಲ್ಲೂ ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಎಡವಟ್ಟಿನಿಂದಾಗಿ ಹಲವರು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಮಾಹಿತಿ ಇದೆ. ಆದರೆ, ಆ ಬಗ್ಗೆ ಯಾರೊಬ್ಬರೂ ಠಾಣೆಗೆ ಬಂದು ದೂರು ನೀಡಿಲ್ಲ’ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ: ವಾಟ್ಸ್‌ಆ್ಯಪ್‌ ಸಂಖ್ಯೆ:95133 22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT