ಭಾನುವಾರ, ನವೆಂಬರ್ 29, 2020
20 °C
ಮುಂದಿನ ವಾರ ಇನ್ನೂ ದಟ್ಟ ಮಂಜು ಆವರಿಸಲಿದೆ– ಹವಾಮಾನ ಇಲಾಖೆ

ಇಬ್ಬನಿ ತುಂಬಿದ ನಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಗುರುವಾರ ಬೆಳಗಿನ ಜಾವ ಮನೆಯಿಂದ ಹೊರ ಬಂದವರಿಗೆ ತಾವು ಬೆಂಗಳೂರಿನಲ್ಲಿದ್ದೇವೋ, ಊಟಿಯಲ್ಲಿದ್ದೇವೋ ಎಂಬ ಅನುಮಾನ ಕಾಡಿತ್ತು. ಅದಕ್ಕೆ ಕಾರಣ, ನಗರ ಪೂರ್ತಿ ಇಬ್ಬನಿ ಹೊದ್ದಿತ್ತು.

‘ಬೆಳಿಗ್ಗೆ ತುಂಬಾ ಇಬ್ಬನಿ ಬಿದ್ದಿತ್ತು. ಮನೆ ಮೇಲೆ ನಿಂತು ನೋಡಿದರೆ ರಸ್ತೆಗಳೇ ಕಾಣುತ್ತಿರಲಿಲ್ಲ. ತುಂಬಾ ತಂಪಾದ ವಾತಾವರಣವಿತ್ತು’ ಎಂದು ಜೆ.ಪಿ. ನಗರದ ನಯನಾ ಹೇಳಿದರು.

ಇಬ್ಬನಿಯಿಂದ ವಾತಾವರಣದಲ್ಲಿ ಆದ ಬದಲಾವಣೆಯನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದ ಅನೇಕರು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.

‘ನಗರದಲ್ಲಿ ಗುರುವಾರ ಬೆಳಿಗ್ಗೆ ಬಿದ್ದಿದ್ದು ಮಂಜಲ್ಲ, ಇಬ್ಬನಿ. ಮಂಜಿಗಿಂತ ಇಬ್ಬನಿಯ ದಟ್ಟತೆಯು ಕಡಿಮೆ ಇರುತ್ತದೆ. 1,000 ಮೀಟರ್‌ ದೂರದವರೆಗಿನ ವಸ್ತುಗಳು ಸ್ಪಷ್ಟವಾಗಿ ಕಾಣುತ್ತಿದ್ದರೆ ಅದು ಇಬ್ಬನಿ. ಅದೇ, 1000 ಮೀಟರ್‌ ದೂರದವರೆಗಿನ ವಸ್ತುಗಳೂ ಸರಿಯಾಗಿ ಕಾಣದಿದ್ದರೆ ಅದನ್ನು ಮಂಜು ಎನ್ನಬಹುದು’ ಎಂದು ವಿಜ್ಞಾನಿ ವಿ.ಎಸ್. ಪ್ರಕಾಶ್ ಹೇಳಿದರು.

‘ಇಬ್ಬನಿ ಮತ್ತು ಮಂಜು ಮಳೆಯ ರೂಪಗಳೇ. ಮಂಜು ಮತ್ತು ಇಬ್ಬನಿ ತೀರಾ ಸಣ್ಣ ಸಣ್ಣ ಹನಿಗಳ ರೂಪದಲ್ಲಿ ಬೀಳುತ್ತದೆ. ವಾತಾವರಣದಲ್ಲಿ ತಾಪಮಾನ ಕಡಿಮೆಯಾಗಿ, ಆರ್ದ್ರತೆ ಹೆಚ್ಚಾದಾಗ ಇಬ್ಬನಿ ಬೀಳುತ್ತದೆ’ ಎಂದರು.

‘ಬಂಗಾಳ ಕೊಲ್ಲಿಯಲ್ಲಿ ತಾಪಮಾನ ಕುಸಿದಿರುವುದರಿಂದ ಮುಂದಿನ ವಾರದಿಂದ ನಗರದಲ್ಲಿ ದಟ್ಟ ಮಂಜು ಆವರಿಸಬಹುದು. ಆದರೆ, ಸದ್ಯಕ್ಕೆ ಬೀಳುತ್ತಿರುವುದು ಇಬ್ಬನಿ. ನವೆಂಬರ್‌ ಮೊದಲ ವಾರದಲ್ಲಿ ದಟ್ಟ ಮಂಜು ಬೀಳುವ ವರದಿ ಬಂದಿರುವುದರಿಂದ ಬುಧವಾರ ಈ ಬಗ್ಗೆ ಸಭೆ ನಡೆಸಿದ್ದೇವೆ. ಮಂಜಿನಿಂದ ಬಹುಮುಖ್ಯ ಪರಿಣಾಮ ಆಗುವುದು ವಿಮಾನಗಳ ಸಂಚಾರದ ಮೇಲೆ. ಮುಂದಿನ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಹವಾಮಾನ ಇಲಾಖೆಯ ವಿಮಾನಯಾನ ವಿಭಾಗದ ನಿರ್ದೇಶಕ ಎಲ್. ರಮೇಶ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಈ ಸಮಯದಲ್ಲಿ ಕೇವಲ 11 ದಿನ ದಟ್ಟ ಮಂಜು ಬಿದ್ದಿತ್ತು. ಈ ಬಾರಿ ನವೆಂಬರ್‌ನಿಂದ ಫೆಬ್ರುವರಿಯವರೆಗೆ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು