ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಪ್ರಯಾಣಿಕರ ಗುರಿಯಾಗಿಸಿ ಮೊಬೈಲ್ ಕಳ್ಳತನ: ಗೋಕಾವರಂ ಗ್ಯಾಂಗ್‌ ಬಂಧನ

ಆಂಧ್ರಪ್ರದೇಶದ ‘ಗೋಕಾವರಂ ಗ್ಯಾಂಗ್‌’
Published 12 ಏಪ್ರಿಲ್ 2024, 23:33 IST
Last Updated 12 ಏಪ್ರಿಲ್ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್ ಹತ್ತುವ ನೆಪದಲ್ಲಿ ಪ್ರಯಾಣಿಕರ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ‘ಗೋಕಾವರಂ ಗ್ಯಾಂಗ್‌’ನ ಆರು ಮಂದಿ ಆರೋಪಿಗಳನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಯಿಕುಮಾರ್‌, ಪೆದ್ದರಾಜು, ವೆಂಕಟೇಶ್, ರಮೇಶ್‌, ರವಿತೇಜ, ಬಾಲರಾಜು ಬಂಧಿತ ಆರೋಪಿಗಳು.

ಬಂಧಿತರಿಂದ ₹30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಏಪ್ರಿಲ್‌ 4ರಂದು ವ್ಯಕ್ತಿಯೊಬ್ಬರು, ಬಿಎಂಟಿಸಿ ಬಸ್‌ ಹತ್ತುವಾಗ ಇದೇ ಗ್ಯಾಂಗ್‌ನ ಆರೋಪಿಗಳು ಮೊಬೈಲ್‌ ಕಳವು ಮಾಡಿದ್ದರು. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಮೊದಲ ಬಾರಿಗೆ ಈ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ’ ಎಂದು ಮೂಲಗಳು ತಿಳಿಸಿವೆ.

‘ಪ್ರತಿನಿತ್ಯ ಆರೋಪಿಗಳು ಯಾವುದಾದರೂ ಒಂದು ಬಸ್‌ ಶೆಲ್ಟರ್‌ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬಸ್ ಬಂದ ಕೂಡಲೇ ಐವರು ಆರೋಪಿಗಳು, ಬಸ್ ಏರುವಂತೆ ನಟಿಸಿ ಜನಸಂದಣಿ ಸೃಷ್ಟಿಸುತ್ತಿದ್ದರು. ಅದರಲ್ಲಿ ಒಬ್ಬ ಆರೋಪಿ ಮೊಬೈಲ್‌ ಕದಿಯುತ್ತಿದ್ದ. ಮೊಬೈಲ್‌ ಕಳ್ಳತನ ಮಾಡಿದ ಆರೋಪಿ, ಅಲ್ಲೇ ಇಳಿದು ಹೋಗುತ್ತಿದ್ದ. ಉಳಿದವರು ಮುಂದಿನ ನಿಲ್ದಾಣಗಳಲ್ಲಿ ಇಳಿಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶದಿಂದ ಬಂದಿದ್ದ ಆರೋಪಿಗಳು ಕಾಡುಗೋಡಿ ಹಾಗೂ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದರು. ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಅಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಚಿನ್ನಸಂದ್ರದ ಕೊಠಡಿಯಲ್ಲಿ 80 ಮೊಬೈಲ್‌ಗಳು ಹಾಗೂ ಆವಲಹಳ್ಳಿಯ ಕೊಠಡಿಯಲ್ಲಿ 24 ಮೊಬೈಲ್‌ಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು.

‘107 ಮೊಬೈಲ್‌ ಪೈಕಿ ಒಂದು ಮೊಬೈಲ್‌ ವಾರಸುದಾರರು ಮಾತ್ರ ಸಿಕ್ಕಿದ್ದಾರೆ. ಉಳಿದ ಮೊಬೈಲ್‌ ಮಾಲೀಕರು ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.

ಹೊರರಾಜ್ಯಕ್ಕೆ ಸಾಗಾಟ

ಕದ್ದ ಮೊಬೈಲ್‌ಗಳನ್ನು ಒಂದು ಕೊಠಡಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ನಂತರ ಅವುಗಳನ್ನು ಅಂತರ ರಾಜ್ಯ ಬಸ್‌ಗಳ ಮೂಲಕ ಹೊರರಾಜ್ಯಕ್ಕೆ ಕೊಂಡೊಯ್ದು ಅಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT