ಮಂಗಳವಾರ, ಸೆಪ್ಟೆಂಬರ್ 21, 2021
25 °C
ಕೊರೊನಾ ಭೀತಿ: ಕುರಿ ಸಂತೆ ನಿಷೇಧ ಪರಿಣಾಮ

ಮಾಂಸ: ಬೇಡಿಕೆ, ಬೆಲೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಸಮಸ್ಯೆಯಿಂದ ಬೆಲೆ ತುಟ್ಟಿಯಾಗಿದೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಕೇಳಿದಷ್ಟು ಹಣ ಕೊಟ್ಟರೂ ಮಾಂಸ ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಕುರಿ ಸಂತೆಗಳನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ, ಕುರಿ ಮಾರಾಟ ನಡೆಯುತ್ತಿಲ್ಲ. ಒಂದೊ,  ಎರಡೊ ಕುರಿಗಳನ್ನು ಕಷ್ಟಪಟ್ಟು ಖರೀದಿಸಿ ತಂದು ಕೊಯ್ದು ಮಾರಾಟ ಮಾಡುತ್ತಿದ್ದೇವೆ ಎಂಬುದು ಬೆಂಗಳೂರು ನಗರದ ಮಾಂಸ ಮಾರಾಟಗಾರರ ಅಭಿಪ್ರಾಯ.

ಸಾಮಾನ್ಯ ಸಂದರ್ಭದಲ್ಲಿ ₹560ರಿಂದ ₹600 ಇದ್ದ ಕೆ.ಜಿ ಮಾಂಸವೀಗ ₹750 ರಿಂದ ₹800ಕ್ಕೆ ಮಾರಾಟವಾಗುತ್ತಿದೆ. ಹಳ್ಳಿ ಭಾಗದಲ್ಲಿ ₹350ರಿಂದ ₹450ವರೆ‌ಗಿದ್ದ ಕೆ.ಜಿ ಸದ್ಯ ₹ 550ರಿಂದ ₹ 650ಕ್ಕೆ ಏರಿಕೆಯಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಲಾಕ್‌ಡೌನ್‌ ಆಗಿದ್ದರೂ ಮಾಂಸ, ಕೋಳಿ ಮಾಂಸ ಮಾರಾಟ ಅಬಾಧಿತ. ಆದರೂ ಮಾಂಸದ ಅಂಗಡಿಗಳು ತೆರೆಯುತ್ತಿಲ್ಲ. ಉಲ್ಲಾಳ ರಸ್ತೆ ಮಾರುತಿ ನಗರದಲ್ಲಿರುವ ಕರ್ನಾಟಕ ಮಟನ್‌ ಸ್ಟಾಲ್‌ ಲಾಕ್‌ಡೌನ್‌ ಆದಾಗಿನಿಂದ ಭಾನುವಾರ ಬಿಟ್ಟು ಬೇರೆ ದಿನಗಳಲ್ಲಿ ಮಾರಾಟ ನಡೆಯುತ್ತಿಲ್ಲ. ಭಾನುವಾರವೂ ಅಲ್ಪಸ್ವಲ್ವ ಪ್ರಮಾಣದಲ್ಲಿ ಮಾರಾಟ ನಡೆಯುತ್ತಿದೆ.

ಬ್ಯಾಟರಾಯನಪುರದ ಪಾಪಣ್ಣ ಮಟನ್‌ಸ್ಟಾಲ್‌ ಇಡೀ ನಗರದಲ್ಲೇ ಹೆಸರುವಾಸಿ. ಲಾಕ್‌ಡೌ್ನ್‌ ಘೋಷಣೆಯಾದಾಗಿನಿಂದ ಭಾನುವಾರ ಮಾತ್ರ ಮಾಂಸ ಮಾರಾಟ ನಡೆಯುತ್ತಿದೆ. ಸಾಮಾನ್ಯ  ಸಂದರ್ಭಗಳಲ್ಲಿ ಭಾನುವಾರಗಳಂದು 120– 125 ಕುರಿ ಕೊಯ್ದು ಮಾರುತ್ತಿದ್ದರು. ಕಳೆದ ಭಾನುವಾರ 60 ಕುರಿಗಳನ್ನು ಮಾತ್ರ ಕೊಯ್ಯಲಾಗಿತ್ತು. ‍‍‍ಜನರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಹೆಚ್ಚು ಕುರಿಗಳನ್ನು ಕತ್ತರಿಸಲಿಲ್ಲ ಎಂದು ‍ಪಾಪಣ್ಣ ಅವರ ಪುತ್ರ ಸಂತೋಷ್ ಹೇಳಿದರು.

‘ಭಾನುವಾರ ಕೆ.ಜಿ ₹ 750ಕ್ಕೆ ಮಾರಿದ್ದೇವೆ. ಮುಂದಿನವಾರ ಅನಿವಾರ್ಯವಾಗಿ ₹ 800ಕ್ಕೆ ಮಾರಬೇಕಾಗಿದೆ. ಕುರಿಗಳ ಬೆಲೆ ದುಬಾರಿಯಾಗಿದೆ. ₹10 ಸಾವಿರಕ್ಕೆ ಸಿಗುತ್ತಿದ್ದ ಮರಿಗೀಗ ₹13 ಸಾವಿರದಿಂದ ₹14 ಸಾವಿರ ಕೊಡಬೇಕಾಗಿದೆ. ಸಾಗಣೆ ವೆಚ್ಚವೂ ದುಪ್ಪಟ್ಟಾಗಿದೆ. ಪೊಲೀಸರ ಕಾವಲಿನ ನಡುವೆ ನಾವು ವ್ಯಾಪಾರ ಮಾಡುತ್ತಿದ್ದೇವೆ. ಗಿರಾಕಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ವಿತರಿಸುತ್ತಿದ್ದೇವೆ’ ಎಂದರು ಸಂತೋಷ್‌.

ಯುಗಾದಿ ಹಬ್ಬದ ಮಾರುದಿನ ಆಚರಿಸುವ ಹೊಸ ತೊಡಕಿನಂದು ರಾಜ್ಯದಲ್ಲಿ ಆರು ಲಕ್ಷ ಕೆ.ಜಿ ಮಾಂಸ ಮಾರಾಟವಾಗಿದೆ. ಬೆಂಗಳೂರಿನಲ್ಲಿ 1.5 ಲಕ್ಷ ಕೆ.ಜಿ ವಹಿವಾಟು ನಡೆದಿದೆ ಎಂದು ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ತಿಳಿಸಿದರು.

ಕಾಸು ಕೊಟ್ಟರೂ ಕೋಳಿ ಇಲ್ಲ!
ಕಾಸು ಕೊಟ್ಟರೂ ಕೋಳಿ ಸಿಗುತ್ತಿಲ್ಲ. ಕೊರೊನಾ ಹಾಗೂ ಹಕ್ಕಿಜ್ವರದ ಭೀತಿಯ ಪರಿಣಾಮ ಫಾರಂಗಳ ಮಾಲೀಕರು ಕೋಳಿಗಳನ್ನು ಜೀವಸಹಿತ ಗುಂಡಿಯಲ್ಲಿ ಮುಚ್ಚಿದ್ದಾರೆ. ಈಗ ಕೋಳಿ ಮಾಂಸ ತಿನ್ನುವ ಬಗ್ಗೆ ಇದ್ದ ಗೊಂದಲ ನಿವಾರಣೆ ಆಗಿದೆ. ಆದರೆ, ಮಾರುಕಟ್ಟೆಯಲ್ಲಿ ಕಾಸು ಕೊಟ್ಟರೂ ಕೋಳಿ ಸಿಗುತ್ತಿಲ್ಲ.

ಕೋಳಿ ಮಾಂಸದ ಬೆಲೆ ಗುರುವಾರ ಕೆ.ಜಿ ₹ 120 ಇದೆ. ಬೇಡಿಕೆ ಏನೋ ಇದೆ. ಆದರೆ, ಕೋಳಿ ಎಲ್ಲಿಂದ ತರುವುದು ಎಂಬುದು ಚನ್ನಪಟ್ಟಣದಲ್ಲಿ ಫಾರಂ ಇಟ್ಟಿರುವ ಕೆಂಗೇರಿಯ ಕಬ್ಬಾಳಮ್ಮ ಕೋಳಿ ಅಂಗಡಿ ಮಾಲೀಕ ಪ್ರಸನ್ನ ಕುಮಾರ್‌ ಪ್ರಶ್ನೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು