ಭಾನುವಾರ, ನವೆಂಬರ್ 27, 2022
26 °C

ಬೆಂಗಳೂರು ನಗರದಲ್ಲಿ ಸಾವಿರಕ್ಕೂ ಅಧಿಕ ರಸ್ತೆ ಗುಂಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪ್ರಮುಖ ಹಾಗೂ ಮುಖ್ಯರಸ್ತೆಗಳಲ್ಲಿ 1,051 ಗುಂಡಿಗಳಿದ್ದು, ಅವುಗಳನ್ನು ಮುಚ್ಚಲು ಬಿಬಿಎಂಪಿ ಹಾಗೂ ಪೊಲೀಸ್‌ ಅಧಿಕಾರಿಗಳು ತ್ವರಿತವಾಗಿ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಬಿಬಿಎಂಪಿ ಆಡಳಿತಗಾರ ರಾಕೇಶ್‌ ಸಿಂಗ್‌ ಸೂಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಪ್ರಮುಖ ಹಾಗೂ ಮುಖ್ಯರಸ್ತೆಗಳಲ್ಲಿ ಸಂಚಾರ ಪೊಲೀಸ್ ಇಲಾಖೆಯಿಂದ 4,545 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1,051 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದ್ದು ಇವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.

ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಮನ್ವಯ ಸಭೆಗೆ ವಿವಿಧ ಇಲಾಖೆಗಳು ಹಾಜರಾಗುತ್ತಿದ್ದು,ಮುಂದಿನ ಸಭೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಆಹ್ವಾನಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಹೆಚ್ಚು →ಸಂಚಾರದಟ್ಟಣೆ→ಯಾಗುವ ಪ್ರಮುಖ →ಜಂಕ್ಷನ್‌ಗಳಾದ →ಸಿಲ್ಕ್ ಬೋರ್ಡ್ →ಜಂಕ್ಷನ್, ಜಯದೇವ →ಜಂಕ್ಷನ್, ಎಂ.ಎಂ.ಟೆಂಪಲ್ ಜಂಕ್ಷನ್ (ಟಿನ್ ಫ್ಯಾಕ್ಟರಿ), ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಸಾರಕ್ಕಿ ಜಂಕ್ಷನ್, ಕೆ.ಎಸ್.ಲೇಔಟ್ ಜಂಕ್ಷನ್, ಬನಶಂಕರಿ ಜಂಕ್ಷನ್‌ಗಳಲ್ಲಿಕೈಗೊಳ್ಳಬೇಕಾಗಿರುವಕೆಲವು ಕ್ರಮಗಳು ಬಾಕಿ ಇವೆ. →ಅವುಗಳನ್ನು →ಕೂಡಲೇ ಅನುಷ್ಠಾನಗೊಳಿಸಬೇಕು ಎಂದರು.

ಮುಖ್ಯ →ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಮಂಡಳಿ ಇಲಾಖೆಯಿಂದ ಕಾಮಗಾರಿ ನಡೆಸುವ ಸ್ಥಳದಲ್ಲಿ ಪೈಪ್‌ಗಳನ್ನು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿಯೇ ಹಾಕಲಾಗುತ್ತಿದೆ. ಇದರಿಂದ ಸಾರ್ವ ಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಸ್ತೆ/ ಪಾದಚಾರಿ ಮಾರ್ಗಗಳಲ್ಲಿ ಪೈಪ್‌ಗಳನ್ನು ಹಾಕದಂತೆ ಕ್ರಮವಹಿಸಿ’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಪೆಟ್ಟಿ ಶಾಪ್‌ಗಳಿರುವುದು ಹಾಗೂ ರಸ್ತೆ ಬದಿ ಕಟ್ಟಡದ ಭಗ್ನಾವಶೇಷಗಳನ್ನು ಹಾಕುವುದರ ಪಟ್ಟಿ ಇದೆ. ಅದರನುಸಾರ ಎಲ್ಲೆಲ್ಲಿ ಪೆಟ್ಟಿ ಅಂಗಡಿಗಳು ಹಾಗೂ ಕಟ್ಟಡ ಭಗ್ನಾವಶೇಷಗಳಿವೆ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ, ಯೋಜನೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಎಂಟಿಸಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ಮರದ ಕೊಂಬೆ ಕಟಾವಿಗೆ ಸೂಚನೆ 

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ, ಜಂಕ್ಷನ್‌ಗಳಲ್ಲಿರುವ ಮರಗಳ ಕೊಂಬೆಗಳು ರಸ್ತೆಗೆ ಬಂದಿವೆ. ಅದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಅಲ್ಲದೆ ಬೀದಿ ದೀಪಗಳಿಗೂ ಮರದ ಕೊಂಬೆಗಳು ಅಡ್ಡಿಯಾಗಿರುತ್ತವೆ. ಆದ್ದರಿಂದ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಮರದ ಕೊಂಬೆಗಳನ್ನು ಕಟಾವು ಮಾಡಬೇಕು ಎಂದರು.

50 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್: ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಪಾದಚಾರಿ ಕ್ರಾಸಿಂಗ್ ಮಾಡುವ ಹಾಗೂ ವಾಹನಗಳ ನಿಲುಗಡೆ ಲೈನ್ ಮಾರ್ಕಿಂಗ್ ಮಾಡಲು ಪಟ್ಟಿ ನೀಡಲಾಗಿದೆ. ಇದರ ಅನುಸಾರ ಈಗಾಗಲೇ 35 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್ ಪೂರ್ಣಗೊಳಿಸಿದ್ದು, 7 ಜಂಕ್ಷನ್‌ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಉಳಿದ 8 ಜಂಕ್ಷನ್‌ಗಳಲ್ಲಿ ಕೆಲಸ ಪ್ರಾರಂಭಿಸಬೇಕಿದ್ದು, ತ್ವರಿತವಾಗಿ ಮಾರ್ಕಿಂಗ್ ಕೆಲಸ ಪೂರ್ಣಗೊಳಿಸಲು ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಗುಂಡಿ ಮುಚ್ಚಲು ‘ಎಫ್‌ಎಂಎಸ್‌’

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಹಾಗೂ ದುರಸ್ತಿ ಮಾಡಲು ‘ಫಿಕ್ಸ್‌ ಮೈ ಸ್ಟ್ರೀಟ್‌’ (ಎಫ್ಎಂಎಸ್‌) ಸಾಫ್ಟ್‌ವೇರ್‌ ಅನ್ನು ಅಳವಡಿಸಿಕೊಂಡಿದ್ದು, ಇದರ ಅನುಷ್ಠಾನಕ್ಕೆ ಪ್ರಧಾನ ಎಂಜಿನಿಯರ್‌ ಸಿ.ಎಸ್‌. ಪ್ರಹ್ಲಾದ್‌ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ.

ಈ ಕಾರ್ಯಪಡೆಯಲ್ಲಿ ಎಂಟೂ ವಲಯದ ಮುಖ್ಯ ಎಂಜಿನಿಯರ್‌, ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಸದಸ್ಯರಾಗಿದ್ದಾರೆ. ಪ್ರಧಾನ ಎಂಜಿನಿಯರ್‌ ಅವರ ತಾಂತ್ರಿಕ ಸಲಹೆಗಾರ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಪ್ರತಿ ವಲಯದ ಎಂಜಿನಿಯರ್‌ಗಳೊಂದಿಗೆ ಸಮನ್ವಯ ಸಾಧಿಸಿ, ದುರಸ್ತಿಗೆ ಬೇಕಿರುವ ಸಾಮಗ್ರಿಗಳ ಖರೀದಿ ಹಾಗೂ ವಿತರಣೆಯ ಜವಾಬ್ದಾರಿಯನ್ನು ಈ ಕಾರ್ಯಪಡೆ ಹೊಂದಿರುತ್ತದೆ. ಬಿಬಿಎಂಪಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮೂರು ಮಾದರಿಗಳನ್ನು ಅನುಸರಿಸಲಾಗುತ್ತಿದೆ. ಬಿಬಿಎಂಪಿಯ ಪೂರ್ವ ಹಾಗೂ ಯಲಹಂಕ ವಲಯದಲ್ಲಿರುವ ಘಟಕಗಳ ಆಸ್ಫಾಲ್ಟ್‌ ಬ್ಯಾಚ್‌ ಮಿಕ್ಸ್‌ ಬಳಸಿ ಗುಂಡಿ ಮುಚ್ಚುವುದು ಒಂದು ಮಾದರಿ. ‘ಹಾಟ್‌ ಮಿಕ್ಸ್ ಪ್ಲಾಂಟ್‌’ ಹೊಂದಿರುವವರಿಂದ ಟೆಂಡರ್‌ ಮೂಲಕ ಗುತ್ತಿಗೆದಾರರು ಮಿಶ್ರಣ ಪಡೆದು ಗುಂಡಿ ಮುಚ್ಚುವುದು ಇನ್ನೊಂದು ಮಾದರಿ. ಫೈಥಾನ್‌– ಸ್ವಯಂಚಾಲಿತ ಗುಂಡಿಮುಚ್ಚುವ ಯಂತ್ರಗಳಿಂದ ಕಾರ್ಯಾಚರಣೆ ನಡೆಸುವುದು ಮೂರನೇ ಮಾದರಿ.


Caption

ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಿದ ಮೇಲೆ ಈ ಮೂರು ಮಾದರಿಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಎಫ್‌ಎಂಎಸ್‌ ಮೂಲಕ ಕಾರ್ಯಪಡೆ ಸ್ಥಳೀಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಿದೆ. ಈ ಆದೇಶ ಪಡೆದ ಕೂಡಲೆ 27 ವಲಯವಾರು ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ರಸ್ತೆ ಮೂಲಸೌಕರ್ಯದ ಕಾರ್ಯಪಾಲಕ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ವಿವರವನ್ನು ಎಫ್ಎಂಎಸ್ ಮೂಲಕ ಅಂದೇ ವರದಿ ಮಾಡಲಿದ್ದಾರೆ.

‘ಮಳೆ ನಿಂತ ಮೇಲೆ ಹಲವು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿದ್ದೇವೆ. ಪೊಲೀಸರು ಗುರುತಿಸಿರುವ ರಸ್ತೆ ಗುಂಡಿಗಳಲ್ಲದೆ ವಾರ್ಡ್‌ಗಳಲ್ಲಿ ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳಾಗಿವೆ. ಅವುಗಳನ್ನೆಲ್ಲ ಶೀಘ್ರವಾಗಿಮುಚ್ಚಲಾಗುತ್ತದೆ. ಅದಕ್ಕಾಗಿ ಕಾರ್ಯಪಡೆಕಾರ್ಯನಿರ್ವಹಿಸಲಿದ್ದು, ಎಫ್‌ಎಂಎಸ್‌ ಸಾಫ್ಟ್‌ವೇರ್ಅನ್ನು ಬಳಕೆ ಮಾಡಲಾಗುತ್ತದೆ’ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು ತಿಳಿಸಿದರು.

‘ನಿರ್ಮಾಣ ಸಂದರ್ಭದಲ್ಲಿ ಉಂಟಾಗುವ ಗುಂಡಿಗಳನ್ನು ಹೊರತುಪಡಿಸಿ ಡಿಸೆಂಬರ್‌ ವೇಳೆಗೆ ನಗರದ ರಸ್ತೆಗಳನ್ನುಗುಂಡಿಮುಕ್ತವಾಗಿಸುವುದು ಕಾರ್ಯಪಡೆಯ ಉದ್ದೇಶ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು