ಭಾನುವಾರ, ಸೆಪ್ಟೆಂಬರ್ 19, 2021
30 °C
ಜನರ ಮನೆ ಬಾಗಿಲಿಗೆ ಪಾಲಿಕೆ ವೈದ್ಯರು ಕಾರ್ಯಕ್ರಮ * 7.11 ಲಕ್ಷ ಮಂದಿಯ ಆರೋಗ್ಯ ತಪಾಸಣೆ ಪೂರ್ಣ

ಬೆಂಗಳೂರಲ್ಲಿ 57,528 ಮಂದಿಯಲ್ಲಿ ಗಂಭೀರ ಕಾಯಿಲೆ: ಆರ್. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜನರ ಮನೆ ಬಾಗಿಲಿಗೆ ಪಾಲಿಕೆ ವೈದ್ಯರು’ ಕಾರ್ಯಕ್ರಮದಡಿ ಬಿಬಿಎಂಪಿ ಪಾಲಿಕೆ ವೈದ್ಯರ ನೇತೃತ್ವದ ತಂಡ 21 ದಿನಗಳಲ್ಲಿ ಒಟ್ಟು 2,48,280 ಮನೆಗಳಿಗೆ ಭೇಟಿ ನೀಡಿದೆ. ಇದುವರೆಗೆ 7,11,648 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 57,528 ಮಂದಿ ಅನ್ಯ ಗಂಭೀರ ಕಾಯಿಲೆ ಹೊಂದಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ, ‘ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ತಂಡ ನಗರದ ಪ್ರತಿ ಮನೆಗೂ ಭೇಟಿ ನೀಡಿ ಧೈರ್ಯ ತುಂಬುತ್ತಿದೆ. ಯಾವ ಮನೆಯಲ್ಲಿ ಎಷ್ಟು ಜನ ಇದ್ದಾರೆ, ಕುಟುಂಬದ ಸದಸ್ಯರಿಗೆ ಏನೇನು ಕಾಯಿಲೆಗಳಿವೆ ಎಂಬ ಮಾಹಿತಿ ಕಲೆಹಾಕುತ್ತಿದೆ. ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಹಾಗೂ ‌ಔಷಧ ಸಂಗ್ರಹಕ್ಕೆ ಇದು ಪ್ರಮುಖ ದಾಖಲೆಯಾಗಲಿದೆ’ ಎಂದರು.

‘ದೇಶದಲ್ಲೇ ಮೊದಲ ಬಾರಿ ಬಿಬಿಎಂಪಿ ಕೈಗೊಂಡ ವಿನೂತನ ಕಾರ್ಯಕ್ರಮವಿದು. ಇದುವರೆಗೆ ನಿಗದಿಪಡಿಸಿದ ಗುರಿಯಲ್ಲಿ ಶೇ 90ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಕೆಲವು ಕಡೆ ತಡವಾಗಿ ಸಮೀಕ್ಷೆ ಆರಂಭವಾಗಿದ್ದರಿಂದ ಶೇ 100ರಷ್ಟು ಗುರಿ ಸಾಧನೆ ಸಾಧ್ಯವಾಗಿಲ್ಲ. ಇನ್ನೂ 60 ದಿನ ಕಾಲಾವಕಾಶವಿದ್ದು, ಅಷ್ಟರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುತ್ತದೆ’ ಎಂದರು. 

ಆಯ್ದ 54 ವಾರ್ಡ್‌ಗಳಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿದೆ.

‘ಮೂರನೇ ಅಲೆ ತಡೆಯಲು ಕಾರ್ಯಪಡೆ’

‘ಕೋವಿಡ್‌ ಮೂರನೇ ಅಲೆ ತಡೆಯಲು ಕಾರ್ಯಪಡೆ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನ ಕೈಗೊಂಡಿದ್ದಾರೆ. ಅಗತ್ಯ ಔಷಧ ಖರೀದಿಗೆ ₹ 120 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.  ಮೂರನೇ ಅಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರುವವರಿಗೆ ಕೋವಿಡ್‌ ಕಾಣಿಸಿಕೊಂಡರೆ ಚಿಕಿತ್ಸೆ ಕೊಡಿಸುವುದು ಸುಲಭವಾಗಲಿದೆ’ ಎಂದು ಆರ್‌.ಅಶೋಕ ತಿಳಿಸಿದರು.

‘ಲಸಿಕೆ: ರಾಜಕೀಯ ದುರ್ಬಳಕೆಗೆ ಅವಕಾಶವಿಲ್ಲ’

‘ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ಹಾಕಲಾಗುತ್ತಿದೆ’ ಎಂಬ ಆರೋಪವನ್ನು ಆರ್‌. ಅಶೋಕ ಅಲ್ಲಗಳೆದರು.

‘ಈ ಆರೋಪ ಸುಳ್ಳು. ಎಲ್ಲ ವಾರ್ಡ್‌ಗಳ ಪ್ರಾಥಮಿಕ ಆರೊಗ್ಯ ಕೇಂದ್ರಗಳಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ರಾಜಕೀಯ ಪಕ್ಷದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ರಾಜಕೀಯ ಪಕ್ಷಗಳು ಸ್ವಂತ ಖರ್ಚಿನಲ್ಲಿ ಲಸಿಕೆ ಖರೀದಿಸಿ ಇಂತಹ ವ್ಯವಸ್ಥೆ ಮಾಡಿದ್ದರೆ ಅಭ್ಯಂತರ ಇಲ್ಲ. ಆದರೆ, ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಸಮೀಕ್ಷೆಯಲ್ಲಿ ಕಂಡು ಬಂದಿದ್ದು

- ಕೋವಿಡ್‌ನಿಂದ ಗುಣಮುಖರಾದವರು- 22,313

- ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡವರು- 4,39,777 

- ಲಸಿಕೆಯ ಎರಡು ಡೋಸ್‌ಗಳನ್ನೂ ಹಾಕಿಸಿಕೊಂಡವರು- 1,67,081

- ಮಧುಮೇಹ ಹೊಂದಿರುವವರು- ಶೇ 50.86

- ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು- ಶೇ 35.82

- ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು- ಶೇ 2.48

- ಥೈರಾಯ್ಡ್‌ ಸಮಸ್ಯೆ ಹೊಂದಿರುವವರು-  ಶೇ 2.99

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು