ಶುಕ್ರವಾರ, ಮಾರ್ಚ್ 31, 2023
31 °C
'ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ' ಕುರಿತು ವಿಚಾರ ಸಂಕಿರಣ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಸಾಧನ: ಸಿ. ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಕ್ಕಳ ಚಿಂತನೆ, ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಅತ್ಯುತ್ತಮ ಸಾಧನ. ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸಿದರೆ ಮಾತ್ರ ಅನ್ಯಭಾಷೆಗಳನ್ನು ಕಲಿಯುವುದು ಮತ್ತು ಕಲಿಸುವುದು ಸುಲಭ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್‌ ಅಭಿಪ್ರಾಯಪಟ್ಟರು.

'ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ’ ಎಂಬ ವಿಷಯದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ  ಬುಧವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಭಾಷೆಯಲ್ಲಿ ಸ್ಪಂದಿಸುವ ಶಕ್ತಿಯನ್ನು ಬಹು ಸುಲಭವಾಗಿ ಮಕ್ಕಳು ಪಡೆದುಕೊಳ್ಳುತ್ತಾರೆ. ಮಕ್ಕಳು ಮಾತೃಭಾಷೆಯಲ್ಲಿ ಸ್ವಂತಿಕೆಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಬಹುದು’ ಎಂದೂ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್, ‘ಜಗತ್ತಿನ ಎಲ್ಲ ದೇಶಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡಲು ಒತ್ತು ನೀಡುತ್ತಿರುವುದು ವಿಪರ್ಯಾಸ. ಖಾಸಗಿ ಶಾಲೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ಅವುಗಳ ನಿಯಂತ್ರಣ ಅಸಾಧ್ಯವಾಗಿದೆ’ ಎಂದರು.

ಶಾಸಕ ತನ್ವೀರ್ ಸೇಠ್, ‘ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಕೆ ಹೇಗೆ ಇರಬೇಕು ಎಂಬುದನ್ನು ತಿಳಿಸಬೇಕು. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿರುವ ಕನ್ನಡ ಭಾಷಾ ಕಲಿಕೆಯ ಸಮಸ್ಯೆ ಬಗೆಹರಿಸಿದರೆ ಭಾಷಾ ಕಲಿಕಾ ವಿಚಾರದ ಸಮಸ್ಯೆ ಬಗೆಹರಿಯಲಿದೆ’ ಎಂದರು.

ಶಾಸಕ ಎನ್. ಮಹೇಶ್, ‘ಹಿಂದಿ ರಾಷ್ಟ್ರೀಯ ಭಾಷೆ ಎಂಬ ಅವ್ಯಕ್ತ ವಾತಾವರಣ ಬಹಳ ಅಪಾಯಕಾರಿ. ಕೇಂದ್ರ ಲೋಕಸೇವಾ ಆಯೋಗ, ಬ್ಯಾಂಕಿಂಗ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸ್ಥಳೀಯ ಭಾಷೆಯಲ್ಲಿರಬೇಕು. ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ನೀತಿ ಜಾರಿಗೊಳಿಸಬೇಕು’ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬೇಕು. ಈ ವರ್ಷವಿಡೀ ಈ ಬಗ್ಗೆ ಚರ್ಚೆ ಮಾಡಬೇಕು’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್, ‘ಕನ್ನಡ ಕಟ್ಟುವುದು ಎಂದರೆ ಕನ್ನಡದ ಬೀಜಗಳನ್ನು ಮಕ್ಕಳ ಎದೆಯಲ್ಲಿ, ಭೂಮಿಯಲ್ಲಿ ಬಿತ್ತಬೇಕು. ಭಾರತೀಯತೆಗೆ ಭಂಗ ಬಾರದಂತೆ, ಸಿದ್ಧಾಂತ ಮತ್ತು ರಾಜಕೀಯ ಪಕ್ಷಗಳನ್ನು ಮೀರಿ ಶಿಕ್ಷಣದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸ ಆಗಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು