ಬುಧವಾರ, ಆಗಸ್ಟ್ 10, 2022
21 °C

ವಿವಾಹಿತೆಯ ಚುಡಾಯಿಸಿದ್ದಕ್ಕಾಗಿ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರಾಜದೊರೈ (25) ಎಂಬುವರನ್ನು ಕೊಲೆ ಮಾಡಿ, ಮೃತದೇಹವನ್ನು ಮೂಟೆಯಲ್ಲಿ ತುಂಬಿ ಬಿಸಾಕಿ ಪರಾರಿಯಾಗಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ನ್ಯೂ ತಿಪ್ಪಸಂದ್ರ ನಿವಾಸಿಯಾಗಿದ್ದ ರಾಜದೊರೈ, ಆರೋಪಿ ಬಾಲಾಜಿ ಎಂಬುವರ ಪತ್ನಿಯನ್ನು ಚುಡಾಯಿಸುತ್ತಿದ್ದರು. ಅದೇ ಕೋಪದಲ್ಲೇ ಬಾಲಾಜಿ ಹಾಗೂ ಅವರ ಸ್ನೇಹಿತರು, ರಾಜದೊರೈ ಅವರನ್ನು ಕೊಂದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಕೊಲೇಟ್ ಸರಬರಾಜು ವಾಹನದ ಚಾಲಕರಾಗಿದ್ದ ಬಾಲಾಜಿ, ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತ್ನಿ ಜೊತೆ ಲಿಂಗರಾಜಪುರದಲ್ಲಿ ನೆಲೆಸಿದ್ದರು. ಪತ್ನಿ ಸಹ, ಜೆ.ಬಿ. ನಗರದ ತರಕಾರಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಮಳಿಗೆಯಲ್ಲೇ ರಾಜದೊರೈ ಸಹ ಕೆಲಸಕ್ಕಿದ್ದರು.’

’ಬಾಲಾಜಿ ಪತ್ನಿಯನ್ನು ಚುಡಾಯಿಸುತ್ತಿದ್ದ ರಾಜದೊರೈ, ತಮ್ಮನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಹಿಳೆ, ಪತಿ ಬಾಲಾಜಿಗೆ ವಿಷಯ ತಿಳಿಸಿದ್ದರು. ಕೋಪಗೊಂಡಿದ್ದ ಬಾಲಾಜಿ, ಸ್ನೇಹಿತರ ಜೊತೆ ಸೇರಿ ರಾಜದೊರೈ ಕೊಲೆ ಮಾಡಲು ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.

‘ನ. 29ರಂದು ಲಿಂಗರಾಜಪುರ ಮನೆಗೆ ರಾಜದೊರೈ ಅವರನ್ನು ಕರೆಸಿದ್ದ ಆರೋಪಿ, ಮದ್ಯ ಕುಡಿಸಿದ್ದರು. ನಂತರ, ಕೊಲೆ ಮಾಡಿ ಮೃತದೇಹವನ್ನು ಮೂಟೆಯಲ್ಲಿ ತುಂಬಿ ರಾಮಮೂರ್ತಿನಗರದ ರಸ್ತೆಯಲ್ಲಿ ಎಸೆದು ತಮಿಳುನಾಡಿಗೆ ಹೋಗಿದ್ದರು. ಇತ್ತ, ರಾಜದೊರೈ ನಾಪತ್ತೆ ಬಗ್ಗೆ ಪೋಷಕರು ದೂರು ನೀಡಿದ್ದರು.’

’ಮೃತದೇಹ ಸಿಗುತ್ತಿದ್ದಂತೆ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ತಮಿಳುನಾಡಿಗೆ ಹೋಗಿ ಆರೋಪಿ ಬಾಲಾಜಿ ಹಾಗೂ ಇತರರನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು