ಸೋಮವಾರ, ಜೂನ್ 21, 2021
23 °C
ಜೈಲಿನಿಂದ ಹೊರಬಂದಿದ್ದ ರೌಡಿ ಕೊಲೆ

ಪ್ರತ್ಯೇಕ ಪ್ರಕರಣ; ಮಹಿಳೆ ಸೇರಿ ಮೂವರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಮೂವರನ್ನು ಹತ್ಯೆ ಮಾಡಲಾಗಿದೆ.

ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು ಸಂಧ್ಯಾ (27) ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

‘ಮುನ್ನೇಕೊಳಲು ನಿವಾಸಿ ಸಂಧ್ಯಾ, ಖಾಸಗಿ ಕಂಪನಿ ಉದ್ಯೋಗಿ ನಾಗೇಶ್ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕೆಲಸ ನಿಮಿತ್ತ ನಾಗೇಶ್ ಭಾನುವಾರ ಬೇರೆ ಊರಿಗೆ ಹೋಗಿದ್ದರು. ಮಕ್ಕಳೊಂದಿಗೆ ಸಂಧ್ಯಾ ಮಾತ್ರ ಮನೆಯಲ್ಲಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದರು. ಇದೇ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಸಂಧ್ಯಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಎಚ್ಚರಗೊಂಡ ಮಕ್ಕಳು, ರಕ್ತದ ಮಡುವಿನಲ್ಲಿದ್ದ ತಾಯಿಯ ದೇಹ ಕಂಡು ಅಳಲಾರಂಭಿಸಿದ್ದರು. ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗಲೇ ಮೃತದೇಹ ಕಂಡಿತ್ತು’ ಎಂದೂ ತಿಳಿಸಿದರು.

‘ಮನೆಯಲ್ಲಿ ಯಾವುದೇ ಚಿನ್ನಾಭರಣ ಕಳವು ಆಗಿಲ್ಲ. ಕೌಟುಂಬಿಕ ವಿಚಾರಕ್ಕೆ ಹತ್ಯೆ ಆಗಿರುವ ಸಾಧ್ಯತೆ ಇದೆ. ಪತಿ ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

ಆಟೊ ಚಾಲಕನ ಕೊಲೆ: ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಎನ್.ಎಸ್.ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಮಣಿ (24) ಎಂಬುವರನ್ನು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

‘ಜೇಡಿಮರದ ನಿವಾಸಿ ಮಣಿ (24), ಆಟೋ ಚಾಲಕ. ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.

ಜೈಲಿನಿಂದ ಹೊರಬಂದಿದ್ದ ರೌಡಿ ಹತ್ಯೆ; ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಗಡೆ ಬಂದಿದ್ದ ರೌಡಿ ಸುರೇಶ್‌ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾವಲ್‌ ಬೈರಸಂದ್ರ ನಿವಾಸಿ ಸುರೇಶ್, 2019ರಲ್ಲಿ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನ ಹೆಸರು ಪೂರ್ವ ವಿಭಾಗದ ಠಾಣೆಯೊಂದರ ರೌಡಿಪಟ್ಟಿಯಲ್ಲಿತ್ತು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ತಿಳಿಸಿದರು.

‘ಮೇ ತಿಂಗಳಿನಲ್ಲಿ ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆತ, ಪುನಃ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದನೆಂಬ ಮಾಹಿತಿ ಇದೆ. ಭಾನುವಾರ ರಾತ್ರಿ ಆತನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಕೊತ್ತನೂರು ಠಾಣೆ ವ್ಯಾಪ್ತಿಯ ಬೈರತಿ ಬಂಡೆ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.’

‘ಮಂಗಳವಾರ ಬೆಳಿಗ್ಗೆ ಸಾರ್ವಜನಿಕರೊಬ್ಬರು ನಿರ್ಜನ ಪ್ರದೇಶದ ಬಳಿ ಹೊರಟಿದ್ದಾಗ ಮೃತದೇಹ ಕಂಡು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಳೇ ದ್ವೇಷದಿಂದಾಗಿ ಈ ಕೊಲೆ ನಡೆದಿರುವ ಅನುಮಾನವಿದ್ದು, ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು