ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಕೊಲೆ: ಮಹಿಳೆ ಬಂಧನ

Published 10 ಮೇ 2024, 15:38 IST
Last Updated 10 ಮೇ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರಾದ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ಕ್ (42) ಎಂಬುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಸ್ನೇಹಿತೆ ಪ್ರೇಮಾ ಅವರನ್ನು ಜೀವನ್‌ಬಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮುರುಗೇಶ್‌ ಪಾಳ್ಯದ ಶ್ರೀರಾಮನಗರ ಮಂಜಿ ಬಾಯ್, ಆರೋಪಿ ಪ್ರೇಮಾ ಜೊತೆ ವಾಸವಿದ್ದರು. ಏ‍ಪ್ರಿಲ್ 26ರಂದು ರಾತ್ರಿ ಮಂಜಿ ಬಾಯ್ ಅವರನ್ನು ಕೊಲೆ ಮಾಡಲಾಗಿತ್ತು. ಮೇ 3ರಂದು ಮೃತದೇಹ ಪತ್ತೆಯಾಗಿತ್ತು. ಕೃತ್ಯ ಎಸಗಿ ಪರಾರಿಯಾಗಿದ್ದ ಪ್ರೇಮಾ ಅವರನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

20 ವರ್ಷಗಳ ಸ್ನೇಹ: ‘ಚನ್ನರಾಯಪಟ್ಟಣದ ಪ್ರೇಮಾ ಅವರ ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಕೆಲಸ ಹುಡುಕಿಕೊಂಡು ಪ್ರೇಮಾ ಅವರು 20 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕಂಪನಿಯೊಂದರಲ್ಲಿ ಸ್ವಚ್ಛತೆ ಕೆಲಸಕ್ಕೆ ಸೇರಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಮಂಜಿ ಬಾಯ್ ಪರಿಚಯವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಪರಸ್ಪರ ಸ್ನೇಹಿತರಾಗಿದ್ದ ಇಬ್ಬರು, ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಆಗಾಗ ಜಗಳ ಮಾಡುತ್ತಿದ್ದರು. ಏಪ್ರಿಲ್ 26ರಂದು ರಾತ್ರಿಯೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ಮಂಜಿ ಬಾಯ್, ಚಾಕುವಿನಿಂದ ಪ್ರೇಮಾ ಅವರಿಗೆ ಇರಿಯಲು ಹೋಗಿದ್ದರು. ಅದರಿಂದ ತಪ್ಪಿಸಿಕೊಂಡಿದ್ದ ಪ್ರೇಮಾ, ಮಂಜಿ ಬಾಯ್‌ ಅವರನ್ನು ಹಿಡಿದುಕೊಂಡು ಕುತ್ತಿಗೆಗೆ ಟವಲ್‌ ಬಿಗಿದಿದ್ದರು. ಉಸಿರುಗಟ್ಟಿ ಮಂಜಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.

‘ಕೃತ್ಯದ ಬಳಿಕ ಪ್ರೇಮಾ ನಗರ ತೊರೆದು, ತಮ್ಮೂರಿಗೆ ಹೋಗಿದ್ದರು. ಮೇ 3ರಂದು ಮನೆಯಿಂದ ದುರ್ವಾಸನೆ ಬರುತ್ತಿತ್ತು. ಸಂಬಂಧಿಕರು ಪರಿಶೀಲನೆ ನಡೆಸಿದಾಗ, ಮಂಜಿ ಬಾಯ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡಿತ್ತು. ಆದರೆ, ಸಾವಿನ ಬಗ್ಗೆ ಆರಂಭದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೊಲೆ ಎಂಬುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಸ್ಥಳೀಯರು, ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಲಾಗಿತ್ತು. ಕೊನೆಯಲ್ಲಿ, ಪ್ರೇಮಾ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು. ತಮ್ಮನ್ನು ಕೊಲೆ ಮಾಡಲು ಬಂದಿದ್ದಾಗಿ, ಮಂಜಿ ಬಾಯ್‌ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು.

ಪ್ರೇಮಾ
ಪ್ರೇಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT