ಶನಿವಾರ, ಸೆಪ್ಟೆಂಬರ್ 25, 2021
29 °C

10 ವರ್ಷದ ಬಾಲಕನ ಕೊಂದು, ಸಾಕ್ಷ್ಯ ನಾಶಕ್ಕೆ ಯತ್ನ; ತಾಯಿ ಸೇರಿ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹತ್ತು ವರ್ಷದ ಬಾಲಕನನ್ನು ಕೊಂದು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ ಆರೋಪದಡಿ, ಆತನ ತಾಯಿ ಸೇರಿ‌ ಮೂವರನ್ನು  ಮೈಕೊ‌ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

'ಬಾಲಕನ ತಾಯಿ ಸಿಂಧೂ, ಆಕೆಯ ಸ್ನೇಹಿತ ಎನ್ನಲಾದ ರೌಡಿ ಸುನೀಲ್ ಹಾಗೂ ಇನ್ನೊಬ್ಬ‌ ಮಹಿಳೆಯನ್ನು ಬಂಧಿಸಲಾಗಿದೆ. ಮೂವರನ್ನು‌ ನ್ಯಾಯಾಲಯಕ್ಕೆ ‌ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.

'ಬಾಲಕನ ತಾಯಿ ಸಿಂಧೂ, ರೌಡಿ ಸುನೀಲ್ ಜೊತೆ‌ ಹಲವು ವರ್ಷಗಳಿಂದ ಸಲುಗೆ ಇಟ್ಟುಕೊಂಡಿದ್ದಳು. ಆಗಾಗ ಭೇಟಿ ಆಗುತ್ತಿದ್ದಳು. ಮಗನನ್ನು ಸಾಕಲು ಆಗುವುದಿಲ್ಲವೆಂದು ರೌಡಿಗೆ ಹೇಳಿ, ಆತನ ಮನೆಯಲ್ಲಿ ಬಿಟ್ಟಿದ್ದಳು. ಆಗಾಗ ರೌಡಿ ಮನೆಗೆ ಹೋಗಿ ಬರುತ್ತಿದ್ದಳು.'

'ಅದೇ ಮನೆಯಲ್ಲಿ ರೌಡಿ ಜೊತೆ, ಇನ್ನೊಬ್ಬ ಮಹಿಳೆ ನೆಲೆಸಿದ್ದಳು. ಆಕೆಯೂ ರೌಡಿ‌ ಜೊತೆ ಸಲುಗೆಯಿಂದ ಇದ್ದಳು' ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

'ಫೆ. 2ರಂದು ಮನೆಯಲ್ಲಿ ಬಾಲಕನ ಮೇಲೆ  ಹಲ್ಲೆ ಮಾಡಿದ್ದ ರೌಡಿ, ಪೈಪ್‌ನಿಂದ ಹೊಡೆದಿದ್ದ. ತೀವ್ರ ಗಾಯಗೊಂಡು ಬಾಲಕ ಮನೆಯಲ್ಲೇ ಮೃತಪಟ್ಟಿದ್ದ. ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದ ಆರೋಪಿ, ಗಲಾಟೆ ಮಾಡಿದ್ದಕ್ಕೆ‌ ಕೊಲೆ‌ ಮಾಡಿದೆ ಎಂದಿದ್ದ. 'ನಮ್ಮಿಬ್ಬರ ಸಂಬಂಧವನ್ನು‌ ಮುಂದುವರಿಸೋಣ. ಈ ಕೊಲೆ ವಿಷಯವನ್ನು ಯಾರಿಗೂ ಹೇಳಬೇಡ' ಎಂದು‌ ಹೇಳಿದ್ದ. ಅದಕ್ಕೆ ಒಪ್ಪಿದ್ದ ಆಕೆ, ರೌಡಿ ಜೊತೆ ಸೇರಿ ಮಗನ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ತಮಿಳುನಾಡು ಬಳಿಯ ಬರಗೂರ್ ಸಮೀಪದ ನಿರ್ಜನ ಪ್ರದೇಶದಲ್ಲಿ ‌ಎಸೆದು ಬಂದಿದ್ದರು.'

'ಹಲವು ತಿಂಗಳು‌ ಬಿಟ್ಟು ಠಾಣೆಗೆ ಬಂದಿದ್ದ ತಾಯಿ, ಮಗ ಕಾಣೆಯಾದ ಬಗ್ಗೆ ದೂರು‌ ನೀಡಿದ್ದಳು. ಆಕೆ ಹಾಗೂ ಆಕೆಯ ಜೊತೆ ಬಂದಿದ್ದವರ‌ ಮೇಲೆಯೇ ಅನುಮಾನ ಇತ್ತು. ಎಲ್ಲರ ಮೇಲೆ ಕಣ್ಣಿಡಲಾಗಿತ್ತು. ಇತ್ತೀಚೆಗೆ ರೌಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿಷಯ ಬಾಯ್ಬಿಟ್ಟ. ನಂತರ, ತಾಯಿ ಹಾಗೂ ಇನ್ನೊಬ್ಬ ಮಹಿಳೆಯನ್ನು ಬಂಧಿಸಲಾಯಿತು' ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು