ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ಸಿಟಿ ಮೈ ಬಜೆಟ್‌ ಅಭಿಯಾನಕ್ಕೆ ಚಾಲನೆ

Last Updated 21 ಡಿಸೆಂಬರ್ 2020, 9:43 IST
ಅಕ್ಷರ ಗಾತ್ರ

ಬೆಂಗಳೂರು: ಶೌಚಾಲಯ ಮತ್ತು ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ‘ಮೈ ಸಿಟಿ ಮೈ ಬಜೆಟ್ 2021–22’ ಅಭಿಯಾನಕ್ಕೆ ಸೋಮವಾರ ಬಿಬಿಎಂಪಿ ಚಾಲನೆ ನೀಡಿದೆ.

ಜನಾಗ್ರಹ ತಂಡದ ಸಹಯೋಗದಲ್ಲಿ ಆಯೋಜಿಸಿರುವ ಈ ಅಭಿಯಾನದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬಜೆಟ್ ಬಸ್ ಮತ್ತು 7 ಎಲೆಕ್ಟ್ರಿಕ್ ಆಟೋರಿಕ್ಷಾಗಳ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಈ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 14 ಸಾವಿರ ಕಿಲೋ ಮೀಟರ್ ರಸ್ತೆಯಿದ್ದು, ಎಲ್ಲಾ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಇರಬೇಕೆಂಬುದು ನಾಗರಿಕರ ಆಶಯ. ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಿಲ್ಲ, ಇನ್ನು ಕೆಲವೆಡೆ ಇದ್ದರೂ ಸಾರ್ವಜನಿಕರು ಸುರಕ್ಷಿತವಾಗಿ ನಡೆಯದಂತಹ ಪರಿಸ್ಥಿತಿ ಇದೆ. ಕಿರಿದಾದ ಪಾದಚಾರಿ ಮಾರ್ಗ, ಸ್ಲ್ಯಾಬ್‌ಗಳೇ ಇಲ್ಲದಿರುವುದು, ಟ್ರಾನ್ಸ್‌ಫಾರ್ಮರ್ ಅಡ್ಡ ಇರುವುದು, ಕಸ ಬಿದ್ದಿದೆ’ ಎಂದರು.

‘ಬೆಂಗಳೂರಿನ ಹವಾಮಾನ ನೋಡಿದರೆ ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ನಡೆದುಕೊಂಡು ಹೋಗಬಹುದು. ಪಾದಚಾರಿ ಮಾರ್ಗಗಳು ಸುಗಮ ಸಂಚಾರಕ್ಕೆ ಅನುಗುಣವಾಗಿದ್ದರೆ ವಾಹನ ಬಳಕೆಯನ್ನು ಜನ ಕಡಿಮೆ ಮಾಡುತ್ತಾರೆ. ಉತ್ತಮ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಈ ಅಭಿಯಾನವು ಜನವರಿ 7ರ ತನಕ ನಡೆಯಲಿದ್ದು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಂಡು ಮುಂದಿನ ಅಯವ್ಯಯದಲ್ಲಿ ಸೇರಿಸಲಾಗುವುದು. ವೆಬ್‌ಸೈಟ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಅಭಿಪ್ರಾಯ ಸಂಗ್ರಹಿಸಬಹುದು’ ಎಂದು ತಿಳಿಸಿದರು.

ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ‘ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಪಾಲಿಕೆ ವತಿಯಿಂದ ಸಾಕಷ್ಟು ಅನುದಾನ ಮೀಸಲಿಡಲಾಗಿದೆ. ಆದರೆ, ಶೌಚಾಲಯಗಳನ್ನು ಎಲ್ಲಿ ನಿರ್ಮಿಸಬೇಕು ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

1015 ಶೌಚಾಲಯಗಳ ಕೊರತೆ

ಮಾನದಂಡದ ಪ್ರಕಾರ ನಗರದಲ್ಲಿ 1,600 ಶೌಚಾಲಯಗಳಿರಬೇಕು. ಆದರೆ, 585 ಶೌಚಾಲಯಗಳಿವೆ. ಇದರಲ್ಲಿ ಕೆಲವು ಬಳಕೆ ಮಾಡದಂತಹ ಸ್ಥಿತಿ ಇದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.

ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಬಳಕೆ ಮಾಡದ ಸ್ಥಿತಿಯಲ್ಲಿವೆ. ಮೂತ್ರ ವಿಸರ್ಜನೆ ಮಾಡುವಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಮಾಡಬೇಕಿದೆ. ಎಲ್ಲೆಲ್ಲಿ ಶೌಚಾಲಯಗಳ ಅಗತ್ಯವಿದೆ ಎಂಬುದರ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT