ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರಕ್ಕೆ ಹೊಸ ಗಡುವು

ಏಳು ವರ್ಷಗಳ ಹಿಂದೆ ಚಾಲನೆ ನೀಡಲಾಗಿದ್ದ ಕಾಮಗಾರಿ-ಸೆಪ್ಟೆಂಬರ್‌ನಲ್ಲಿ ಶುರುವಾಗುವ ನಿರೀಕ್ಷೆ
Published 21 ಜೂನ್ 2024, 0:30 IST
Last Updated 21 ಜೂನ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಹುತೇಕ ಎಲ್ಲ ಕೆಲಸಗಳು ಮುಗಿದಿವೆ. ಸೆಪ್ಟೆಂಬರ್‌ ಒಳಗೆ ಮೆಟ್ರೊ ರೈಲು ಸಂಚಾರ ಗ್ಯಾರಂಟಿ...

‘ನಮ್ಮ ಮೆಟ್ರೊ‘ ನಾಗಸಂದ್ರ – ಮಾದಾವರ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭಕ್ಕೆ ಬಿಎಂಆರ್‌ಸಿಎಲ್‌ ನೀಡುತ್ತಿರುವ ಹೊಸ ಗಡುವು ಇದು. 

ಈ ವಿಸ್ತರಿತ ಮಾರ್ಗದ ಕಾಮಗಾರಿ ಆರಂಭವಾಗಿ ಏಳು ವರ್ಷಗಳು ಕಳೆದರೂ ರೈಲು ಸಂಚರಿಸಲು ಕಾಲ ಕೂಡಿ ಬರುತ್ತಿಲ್ಲ. ಸಂಚಾರದ ಗಡುವು ನಿರಂತರ ಮುಂದಕ್ಕೆ ಹೋಗುತ್ತಿದೆ. ಈಗ ಸೆಪ್ಟೆಂಬರ್‌ ಒಳಗೆ ಮೆಟ್ರೊ ರೈಲು ಸಂಚಾರ ಆರಂಭವಾಗಬಹುದೆಂದು ಬಿಎಂಆರ್‌ಸಿಎಲ್‌ ಹೇಳುತ್ತಿದೆ.

ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ ಈ ಪ್ರದೇಶದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳ ಸಿವಿಲ್‌ ಕಾಮಗಾರಿ ಮುಕ್ತಾಯಗೊಂಡಿವೆ. 3.7 ಕಿಲೋಮೀಟರ್‌ ದೂರದ ಈ ಮಾರ್ಗದಲ್ಲಿ ಗರ್ಡರ್‌ ಅಳವಡಿಕೆ ಸಹಿತ ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ. ಎಲೆಕ್ಟ್ರಿಕ್‌ ಮತ್ತು ಸಿಗ್ನಲಿಂಗ್‌ ಕೆಲಸಗಳು ಬಾಕಿ ಇವೆ.

ವಿಸ್ತರಿತ ಕಾಮಗಾರಿಗೆ 2017ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿತ್ತು. ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೆಲ್ಲ ಇತ್ಯರ್ಥವಾಗಲು ನಾಲ್ಕು ವರ್ಷ ಹಿಡಿದಿತ್ತು. ಪ್ರಕರಣ ಇತ್ಯರ್ಥವಾಗಿ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳಾದವು. ಸಿವಿಲ್‌ ಕಾಮಗಾರಿ ಶೇ 100ರಷ್ಟು ಮುಗಿದಿದ್ದರೂ ತಾಂತ್ರಿಕ ಕೆಲಸಗಳು ಮುಗಿದಿಲ್ಲ. 

2023ರ ಜೂನ್‌ ವೇಳೆಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಮೊದಲು ಗಡುವು ನೀಡಲಾಗಿತ್ತು. ಆನಂತರ 2024ರ ಫೆಬ್ರುವರಿ, ನಂತರ ಜುಲೈಗೆ ನಿಗದಿಯಾಗಿತ್ತು. ಇದೀಗ ಗಡುವು ಸೆಪ್ಟೆಂಬರ್‌ಗೆ ಹೋಗಿದೆ.

‘ತಾಂತ್ರಿಕ ಕೆಲಸಗಳು ಆರಂಭವಾಗಿವೆ. ಸಿಗ್ನಲಿಂಗ್‌ ಸಹಿತ ಎಲೆಕ್ಟ್ರಿಕಲ್‌ ಕೆಲಸಗಳು ನಡೆಯುತ್ತಿವೆ. ಎರಡು ತಿಂಗಳ ಒಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಬಳಿಕ ಸಿಗ್ನಲ್‌ ಪರೀಕ್ಷೆ, ಹಳಿಗಳ ಸಾಮರ್ಥ್ಯ ಪರೀಕ್ಷೆ, ಓಪನ್ ವೆಬ್‌ ಗರ್ಡರ್‌ ಪರೀಕ್ಷೆ ಸಹಿತ ವಿವಿಧ ತಾಂತ್ರಿಕ ಪರೀಕ್ಷೆಗಳು ನಡೆಯಲಿವೆ. ಸೆಪ್ಟೆಂಬರ್‌ ಅಂತ್ಯದ ಒಳಗೆ ರೈಲು ಸಂಚರಿಸಲಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಸಿರು ಮಾರ್ಗ ಯೋಜನೆಯ ಕಾಮಗಾರಿಗಳು ಹಂತಹಂತವಾಗಿ ನಡೆದಿದ್ದವು. ಇದರ ಕೊನೆಯ ಹಂತವಾದ ನಾಗಸಂದ್ರ–ಮಾದಾವರ ಮಾರ್ಗ ಮಾತ್ರ ವಿಪರೀತ ವಿಳಂಬವಾಗಿದೆ. ಈ ಕಾಮಗಾರಿ ಮುಕ್ತಾಯಗೊಂಡರೆ ಹಸಿರು ಮಾರ್ಗ ಶೇ 100ರಷ್ಟು ಪೂರ್ಣಗೊಂಡಂತಾಗಲಿದೆ.

ಶೀಘ್ರ ಆರಂಭಿಸಿ
ಮಾದಾವರವರೆಗೆ ಮೆಟ್ರೊ ಆರಂಭಗೊಂಡರೆ ತುಮಕೂರು ರಸ್ತೆಯಲ್ಲಿ ಉಂಟಾಗುತ್ತಿರುವ ವಾಹನದಟ್ಟಣೆ ಕಡಿಮೆಗೊಳ್ಳಲಿದೆ. ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುತ್ತಿರುವ ಕಾರ್ಮಿಕರು ಉದ್ಯೋಗಿಗಳು ನಾಗಸಂದ್ರದವರೆಗೆ ಬೇರೆ ಬೇರೆ ವಾಹನಗಳಲ್ಲಿ ಬಂದು ಅಲ್ಲಿಂದ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಮಾದಾವರದವರೆಗೆ ಮೆಟ್ರೊ ಸಂಚರಿಸಿದರೆ ಜನರು ಅಲ್ಲೇ ವಾಹನ ನಿಲ್ಲಿಸಿ ಮೆಟ್ರೊ ಹತ್ತಲಿದ್ದಾರೆ. ಕೂಡಲೇ ಮೆಟ್ರೊ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮೆಟ್ರೊ ಪ್ರಯಾಣಿಕ ಎಚ್. ರಮೇಶ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT