ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ: ದನಗಳ ಜಾತ್ರೆಗೂ ಬರದ ಛಾಯೆ

ಹೆಸರಘಟ್ಟದ ತೋಟಗೆರೆ ಬಸವಣ್ಣ ದೇವರ ಜಾತ್ರೆ: ಖರೀದಿಸುವವರ ಕೊರತೆ.
ಬೈಲಮೂರ್ತಿ ಜಿ.
Published 7 ಮಾರ್ಚ್ 2024, 23:01 IST
Last Updated 7 ಮಾರ್ಚ್ 2024, 23:01 IST
ಅಕ್ಷರ ಗಾತ್ರ

ಹೆಸರಘಟ್ಟ: ಸಮೀಪದ ತೋಟಗೆರೆ ಬಸವಣ್ಣ ದೇವಸ್ಥಾನ ಕ್ಷೇತ್ರದಲ್ಲಿ ಏಳು ದಿನಗಳಿಂದ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ 300ಕ್ಕೂ ಅಧಿಕ ರಾಸುಗಳು ಸೇರಿವೆ. ಶುಕ್ರವಾರ ಜಾತ್ರೆ ಸಮಾರೋಪಗೊಳ್ಳಲಿದೆ.

₹40 ಸಾವಿರದಿಂದ ಗರಿಷ್ಠ ₹ 5.50 ಲಕ್ಷ ಬೆಲೆಯಿರುವ ರಾಸುಗಳನ್ನು ರೈತರು ಜಾತ್ರೆಗೆ ವ್ಯಾಪಾರಕ್ಕಾಗಿ ಕರೆತಂದಿದ್ದಾರೆ. ಹಳ್ಳಿಕಾರ್ ತಳಿ ಎತ್ತುಗಳಿವೆ. ವಿವಿಧ ದೇಸಿ ತಳಿಯ ಆಕಳುಗಳಿವೆ. ಸೀಮೆ ಹಸುಗಳನ್ನೂ ರೈತರು ಜಾತ್ರೆ ಕರೆತಂದಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಯ ಮಾಗಡಿ ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು  ತಮ್ಮ ರಾಸುಗಳನ್ನು ಕರೆತಂದಿದ್ದಾರೆ.

‘ನಾಟಿ ತಳಿ ಆಕಳಿನ ಹಾಲು ಗುಣಮಟ್ಟದಿಂದ ಕೂಡಿರುತ್ತದೆ. ಬೇಡಿಕೆಯೂ ಇದೆ. ಈ ಆಕಳು ನಿತ್ಯ ಎರಡು ಲೀಟರ್‌ ಹಾಲು ಕೊಡಬಹುದು. ಆದರೆ, ಆ ಹಾಲಿನಿಂದ ಗುಣಮಟ್ಟದ ತುಪ್ಪ ಸಂಗ್ರಹವಾಗುತ್ತದೆ. ತುಪ್ಪಕ್ಕೂ ಬಹಳ ಬೇಡಿಕೆ ಇದೆ‘ ಎಂದು ನಾಟಿ ಆಕಳನ್ನು ಕರೆತಂದಿದ್ದ ರೈತ ಕೀರ್ತಿ, ದೇಸಿ ತಳಿಗಳ ಹಾಲಿನ ಗುಣವಿಶೇಷವನ್ನು ವಿವರಿಸಿದರು.

ಸಮೀಪದ ಶ್ಯಾಮಭಟ್ಟರ ಪಾಳ್ಯದಿಂದ ಬಂದಿದ್ದ ರೈತ ಬಸವರಾಜಯ್ಶ, ‘ಈ ಬಾರಿ ಮಳೆ ಕೊರತೆ ಇರುವುದರಿಂದ ಹೊಸಕೋಟೆ ಮಂಡ್ಯ ಮೈಸೂರು ಜಿಲ್ಲೆಗಳಿಂದ ಖರೀದಿದಾರರು ಬಂದಿಲ್ಲ. ಹೀಗಾಗಿ, ಜಾನುವಾರುಗಳ ವ್ಯಾಪಾರ ಸ್ವಲ್ಪ ಕಡಿಮೆ ಇದೆ. ಪ್ರತಿ ವರ್ಷ ಭಾರಿ ದರವಿರುವ ರಾಸುಗಳ ವ್ಯಾಪಾರಕ್ಕೆ ಬರುತ್ತಿದ್ದವು. ಈ ವರ್ಷ ರಾಸುಗಳ ವ್ಯಾಪಾರವೇ ಕಡಿಮೆಯಾಗಿದೆ’ ಎಂದು ಬರಗಾಲದ ಪರಿಣಾಮವನ್ನು ವಿವರಿಸಿದರು.

‘ಕಳೆದ ವರ್ಷಕ್ಕಿಂತ ಈ ವರ್ಷ ಜಾತ್ರೆಗೆ ಬಂದಿರುವ ಜಾನುವಾರುಗಳ ಸಂಖ್ಯೆ ತುಸು ಹೆಚ್ಚೇ ಇದೆ. ಆದರೆ, ಮೊದಲು ಹಳ್ಳಿಗಳಲ್ಲಿ ಜಾನುವಾರು ಆಧಾರಿತ ಕೃಷಿ ಇತ್ತು. ರೈತರು ವ್ಯವಸಾಯಕ್ಕಾಗಿ ರಾಸುಗಳನ್ನು ಅವಲಂಬಿಸುತ್ತಿದ್ದರು. ಈಗ ಕಾರ್ಮಿಕರ ಕೊರತೆಯಿಂದಾಗಿ, ಎತ್ತುಗಳ ಜಾಗದಲ್ಲಿ ಯಂತ್ರಗಳು ಬಂದಿವೆ. ಹೀಗಾಗಿ ಕೊಳ್ಳುವವರು ಕಡಿಮೆಯಾಗಿದ್ದಾರೆ’ ಎಂದು ರೈತರೊಬ್ಬರು ವಿಶ್ಲೇಷಿಸಿದರು.

ಗ್ರಾಹಕರ ನಿರೀಕ್ಷೆಯಲ್ಲಿರುವ ವ್ಯಾಪಾರಿ
ಗ್ರಾಹಕರ ನಿರೀಕ್ಷೆಯಲ್ಲಿರುವ ವ್ಯಾಪಾರಿ
ಬಹಳ ಹಿಂದಿನಿಂದಲೂ ಹೋರಿಗಳನ್ನು ಕಟ್ಟುತ್ತಾ ಬಂದಿದ್ದೇವೆ. ಕಸುಬು ಬಿಡಲು ಸಾಧ್ಯವಿಲ್ಲ. ಸಂಪ್ರದಾಯ ಖುಷಿಗಾಗಿ ₹5.50ಲಕ್ಷ ಬೆಲೆ ಬಾಳುವ ಹೋರಿಗಳನ್ನ ಸಾಕಿದ್ದೇನೆ. ಇವು ಮಾರಾಟವಾಗುವ ನಿರೀಕ್ಷೆ ಇದೆ
ಕೇಶವಮೂರ್ತಿ ಬೀರಯ್ಯನಪಾಳ್ಯ
ಮೊದಲಿನಿಂದಲೂ ಪಶು ಸಂಗೋಪನೆ ಎಂದರೆ ನನಗೆ ತುಂಬಾ ಅಚ್ಚು ಮೆಚ್ಚು. ಓದಿನ ಜೊತೆಯಲ್ಲಿಯೇ ಹೋರಿ ಸಾಕಾಣಿಕೆಯನ್ನು ಅಭ್ಯಾಸವನ್ನಾಗಿ ಮಾಡಿಕೊಂಡಿದ್ದೇನೆ
ಸಿದ್ದಾರ್ಥ ತೋಟಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT