ಶುಕ್ರವಾರ, ಅಕ್ಟೋಬರ್ 23, 2020
25 °C

ದೊರೆಸ್ವಾಮಿ, ಹೆಬ್ಬಾರ್‌ ಸಹಿತ ಆರು ಮಂದಿಗೆ ‘ನಮ್ಮ ಬೆಂಗಳೂರು’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಬೆಂಗಳೂರು’ ಪ್ರಶಸ್ತಿಯ 11ನೇ ವರ್ಷದ ಪುರಸ್ಕೃತರ ಪಟ್ಟಿ ಪ್ರಕಟಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿದೆ. ವರ್ಷದ ಮಾಧ್ಯಮ ವ್ಯಕ್ತಿ ವಿಭಾಗದಲ್ಲಿ ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ಮಂಜುನಾಥ ಹೆಬ್ಬಾರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಬೆಂಗಳೂರನ್ನು ಉತ್ತಮ ನಗರವಾಗಿಸಿ, ಬದುಕಲು ಯೋಗ್ಯವಾಗಿಸುವ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡುತ್ತಿರುವವರನ್ನು ಗುರುತಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಈ ಪ್ರಶಸ್ತಿ ನೀಡುತ್ತದೆ. ಶನಿವಾರ ಸಂಜೆ ವರ್ಚುವಲ್‌ ರೂಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. 

ಉದಯೋನ್ಮುಖ ತಾರೆ ವಿಭಾಗದಲ್ಲಿ ಸಾಮಾಜಿಕ ಹಕ್ಕುಗಳು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತ ಚೇತನ್‌ಗೌಡ, ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ನಗರದ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯಶಿಕ್ಷಕಿಯಾಗಿ ಕೆಲಸ ಮಾಡಿರುವ ಕುಮಾರಿ ಇಂದಿರಾ, ವರ್ಷದ ನಮ್ಮ ಬೆಂಗಳೂರಿಗರು ವಿಭಾಗದಲ್ಲಿ ಸಾಮಾಜಿಕ ಕಾರ್ಯಕರ್ತೆ, ಹಸಿರು ದಳ ಸಂಸ್ಥೆಯ ಸಹಸ್ಥಾಪಕಿ ನಳಿನಿ ಶೇಖರ್, ವರ್ಷದ ಸಾಮಾಜಿಕ ಉದ್ಯಮಿ ವಿಭಾಗದಲ್ಲಿ ‘ಸ್ಟೋನ್‌ ಸೂಪ್’‌ ಸಾಮಾಜಿಕ ಉದ್ಯಮದ ಸಹ ಸ್ಥಾಪಕಿ ಸ್ಮಿತಾ ಕುಲಕರ್ಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೂರಾರು ಜನರ ಪೈಕಿ ಅಂತಿಮ ಸುತ್ತಿಗೆ 26 ಜನ ನಾಮನಿರ್ದೇಶನಗೊಂಡಿದ್ದರು. ಅಂತಿಮವಾಗಿ ಆರು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

‘ನಮ್ಮ ಬೆಂಗಳೂರು’ ಪ್ರಶಸ್ತಿಗಳ ಬ್ರಾಂಡ್ ರಾಯಭಾರಿ, ನಟ ರಮೇಶ್ ಅರವಿಂದ್, ‘ಬೆಂಗಳೂರು ನನ್ನ ನಗರ ಮತ್ತು ಈ ನಗರದ ಏಳಿಗೆಗಾಗಿ ನಿಸ್ವಾರ್ಥವಾಗಿ ದುಡಿದ ಪ್ರತಿಯೊಬ್ಬರೂ ನನ್ನ ಹೀರೋಗಳು. ತೆರೆಯ ಮರೆಯಲ್ಲಿಯೇ ಇದ್ದು ಅಡೆತಡೆಗಳ ನಡುವೆಯೂ ನನ್ನ ನಗರವನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತಿರುವ ಅನಾಮಧೇಯ ಹೀರೋಗಳ ಹುಡುಕಾಟವೇ ಈ ಪ್ರಶಸ್ತಿ’ ಎಂದರು.

ಹಿರಿಯ ನಟಿ ಅರುಂಧತಿ ನಾಗ್, ‘ಇಂತಹ ಸಂಕಷ್ಟದ ಸಮಯದಲ್ಲಿಯೂ ನಿಸ್ವಾರ್ಥವಾಗಿ ಕೆಲಸ ಮಾಡುವವರನ್ನು ಪ್ರತಿಷ್ಠಾನ ಗುರುತಿಸುತ್ತಿರುವುದು ಹೊಸ ಭರವಸೆ ಮೂಡಿಸುತ್ತದೆ’ ಎಂದರು. 

ತೀರ್ಪುಗಾರರ ಸಮಿತಿ ಅಧ್ಯಕ್ಷ  ಪ್ರದೀಪ್ ಕರ್, ‘ಅಂತಿಮ ಸುತ್ತು ತಲುಪಿದ ಎಲ್ಲ 26 ಮಂದಿಯೂ ವಿಜಯಿಗಳೇ. ಅಂತಿಮ ವಿಜಯಿಗಳನ್ನು ಗುರುತಿಸುವುದು ಸಮಿತಿಗೆ ಸವಾಲಿನ ಕೆಲಸವಾಗಿತ್ತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು