ಭಾನುವಾರ, ಮಾರ್ಚ್ 29, 2020
19 °C
ಹೊರವರ್ತುಲ ರಸ್ತೆ– ವಿಮಾನ ನಿಲ್ದಾಣ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ₹14,500 ಕೋಟಿ

ನಮ್ಮ ಮೆಟ್ರೊ: ಅನುದಾನಕ್ಕೂ ಮುನ್ನ ಬೇಕು ಅನುಮೋದನೆ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸಿಲ್ಕ್‌ಬೋಡ್‌ ಜಂಕ್ಷನ್‌ನಿಂದ ಕೆ.ಆರ್.ಪುರ ಹಾಗೂ ಹೆಬ್ಬಾಳ ಮೂಲಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹14,500 ಕೋಟಿ ಘೋಷಿಸಿದೆ. ಆದರೆ, ಈ ಮಾರ್ಗಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಅನುದಾನ ಸಿಕ್ಕರೂ, ಅನುಮೋದನೆ ದೊರೆಯದಿರುವುದರಿಂದ ಕಾಮಗಾರಿ ಮುಂದುವರಿಸಲು ಅಡ್ಡಿಗಳು ಎದುರಾಗಲಿದೆ ಎಂದು ರೈಲ್ವೆ ಹೋರಾಟಗಾರರು ಹೇಳುತ್ತಾರೆ. 

56 ಕಿ.ಮೀ ಉದ್ದದ ಈ ರೈಲು ಮಾರ್ಗಕ್ಕೆ ರಾಜ್ಯಸರ್ಕಾರ ಈ ಅನುದಾನ ಘೋಷಿಸಿದೆ. ಆದರೆ, ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಚುರುಕುಗೊಳಿಸಲು ಪ್ರಯತ್ನ ಬೇಕು ಎಂದು ಅವರು ಹೇಳುತ್ತಾರೆ.

56 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗಕ್ಕೆ ರಾಜ್ಯದ ಪಾಲಿನ ರೂಪದಲ್ಲಿ ₹14,500 ಕೋಟಿ ಘೋಷಿಸಲಾಗಿದೆ. 

‘ಹೊರವರ್ತುಲ ರಸ್ತೆಯಿಂದ–ವಿಮಾನ ನಿಲ್ದಾಣ ಮಾರ್ಗಕ್ಕೆ ಎಷ್ಟೇ ಅನುದಾನ ಘೋಷಿಸಿದರೂ ಅನುಮೋದನೆ ದೊರೆಯದೇ ಹೋದರೆ ಕಾಮಗಾರಿ ತುಂಬಾ ವಿಳಂಬವಾಗುತ್ತದೆ. ಹಂತ–ಹಂತವಾಗಿ ಕಾಮಗಾರಿ ಅನುಷ್ಠಾನವಾಗಬೇಕಾದರೆ, ಬ್ಯಾಂಕುಗಳು ಅನುಮೋದನೆ ಪತ್ರವನ್ನು ಕೇಳುತ್ತವೆ’ ಎನ್ನುತ್ತಾರೆ ‘ಸಿಟಿಜನ್ಸ್ ಫಾರ್‌ ಸಿಟಿಜನ್ಸ್’ ವೇದಿಕೆಯ ಸಂಚಾಲಕ ರಾಜಕುಮಾರ್‌ ದುಗರ್‌.

‘ಮೊದಲನೇ ಹಂತದ ಯೋಜನೆಗೆ ಮಾಡಿರುವ ಸಾಲದ ಮರುಪಾವತಿ ಆಗಿಲ್ಲ. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಲ್ಲದೆ, ಎರಡನೇ ಹಂತದ ಕಾಮಗಾರಿ ತೀರಾ ನಿಧಾನಗತಿಯಲ್ಲಿ ಮಾಡಲಾಗಿದೆ. ಇದನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕಾಗಿತ್ತು’ ಎಂದು ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣನವರ ಹೇಳುತ್ತಾರೆ.

24 ಮೇಲ್ಸೇತುವೆ:  ಮೆಟ್ರೊ ಪ್ರಯಾಣಿಕರಲ್ಲದ ಪಾದಚಾರಿಗಳಿಗಾಗಿ 24 ಮೇಲ್ಸೇತುವೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಮೆಟ್ರೊ ನಿಲ್ದಾಣಗಳ ಮೂಲಕ ರಸ್ತೆ ದಾಟುವವರಿಗೆ ಇದರಿಂದ ಅನುಕೂಲವಾಗಲಿದೆ. ಇದರ ಜೊತೆಗೆ ಅಗತ್ಯವಿರುವಲ್ಲಿ ಟ್ರಾವೆಲೇಟರ್‌ ನಿರ್ಮಾಣ ಮಾಡಬೇಕು ಎಂದು ದುಗರ್‌ ಒತ್ತಾಯಿಸುತ್ತಾರೆ.

ಮೊದಲ ಬಾರಿ ಖಾಸಗಿ ಸಹಭಾಗಿತ್ವ
ಹೊರ ವರ್ತುಲ ರಸ್ತೆ ಮೆಟ್ರೊ ಹಾಗೂ ಮಾಗಡಿ ರಸ್ತೆ ಮೆಟ್ರೊ ಲೈಟ್‌ ಮಾರ್ಗವನ್ನು ಖಾಸಗಿ– ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಇದೇ ಮೊದಲ ಬಾರಿಗೆ, ‘ನಮ್ಮ ಮೆಟ್ರೊ’ ಮಾರ್ಗ ನಿರ್ಮಾಣಕ್ಕೆ ಖಾಸಗಿಯವರ ಜೊತೆ ಕೈ ಜೋಡಿಸಲಾಗುತ್ತಿದೆ.

ಬಿಎಂಆರ್‌ಸಿಎಲ್‌ನ ಕಾರ್ಯಕಾರಿ ಮಂಡಳಿ ಈವರೆಗೆ ಗುತ್ತಿಗೆ ಕಾಮಗಾರಿ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಹೊಸ ಪ್ರಸ್ತಾವದ ಅನ್ವಯ, ಇನ್ನು ರಾಜ್ಯ ಸರ್ಕಾರವೇ ಖಾಸಗಿ ಕಂಪನಿಯನ್ನು ಆಯ್ಕೆ ಮಾಡಿ, ಮೆಟ್ರೊ ವ್ಯವಸ್ಥೆಯ ನಿರ್ವಹಣೆಯ ಹೊಣೆ ನೀಡಲಿದೆ.

*
ರಾಜ್ಯದ ಪಾಲಿನ ಜತೆಗೆ ನಮ್ಮ ಮೆಟ್ರೊದ ವಿವಿಧ ಕಾಮಗಾರಿಗೆ ₹3,612 ಕೋಟಿ ನೀಡಲಾಗಿದೆ. ರಾಜ್ಯ ಅನುಮೋದನೆ ದೊರೆತಿರುವುದರಿಂದ ಈ ಕಾಮಗಾರಿ ಪ್ರಾರಂಭಕ್ಕೆ ಅಡ್ಡಿ ಇಲ್ಲ.
-ಯಶವಂತ ಚೌಹಾಣ್, ಬಿಎಂಆರ್‌ಸಿಎಲ್‌ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು