ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತ: 41 ಮರ ಕತ್ತರಿಸಲು ಅನುಮತಿ

Published : 4 ಸೆಪ್ಟೆಂಬರ್ 2024, 15:54 IST
Last Updated : 4 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್), ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

‘ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976‘ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ದೇಶಿಸಬೇಕು’ ಎಂದು ಕೋರಿ ದತ್ತಾತ್ರೇಯ ಟಿ.ದೇವರೆ ಹಾಗೂ ‘ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌’ 2018ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ನಡೆಸಿತು.

ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮಧ್ಯಂತರ ಮನವಿ ಸಲ್ಲಿಸಿದರು. ‘ಮೆಟ್ರೊ ಕಾಮಗಾರಿ ವೇಳೆ ಮರಗಳ ತೆರವು ಹಾಗೂ ಸ್ಥಳಾಂತರಿಸುವ ವಿಚಾರದಲ್ಲಿ ಹೈಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ’ ಎಂದರು.

‘ಅಗರದಿಂದ ಇಬ್ಬಲೂರು ಮಾರ್ಗದ ಎಚ್‌ಎಸ್‌ಆರ್ ಲೇ ಔಟ್ ಮೆಟ್ರೊ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗಗಳಲ್ಲಿ ಬರುವ 20 ಮರಗಳನ್ನು ಸ್ಥಳಾಂತರಿಸಲು ಹಾಗೂ 41 ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿ ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ 2024ರ ಜುಲೈ 20ರಂದು ಅಧಿಕೃತ ಜ್ಞಾಪನಾ ಹೊರಡಿಸಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ತೆರವುಗೊಳಿಸಲು ಅನುಮತಿಸಿರುವ 41 ಮರಗಳಲ್ಲಿ 21 ಮರಗಳು ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿವೆ. ಇನ್ನುಳಿದ 20 ಮರಗಳು, ಓಆರ್‌ಆರ್ ನಂಬರ್ 140ರಿಂದ ಓಆರ್‌ಆರ್ ನಂಬರ್ 175ರ ಮಧ್ಯದ ಹೊರವರ್ತುಲ ರಸ್ತೆಯ ಎಡ, ಬಲಬದಿಗಳಲ್ಲಿ ಬರಲಿವೆ. ಆದ್ದರಿಂದ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಅಧಿಕೃತ ಜ್ಞಾಪನಾ ಪತ್ರ ಆಧರಿಸಿ ಮುಂದುವರಿಯಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್, ‘ತೆರವುಗೊಳಿಸಿದ ಮರಗಳಲ್ಲಿ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್ ಹೇಳಿದೆ. ಈ ಬಗ್ಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಆದರೆ, ಕಳೆದ ಒಂದು ವರ್ಷದಿಂದ ಅಂತಹ ವರದಿ ಸಲ್ಲಿಕೆಯಾಗಿಲ್ಲ. ಈ ಅಂಶವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಧ್ಯಾನ್ ಚಿನ್ನಪ್ಪ, ‘ಹೈಕೋರ್ಟ್ ಆದೇಶ, ತಜ್ಞರ ಸಮಿತಿಯ ಶಿಫಾರಸು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅರ್ಜಿದಾರರ ಪರ ವಕೀಲರು ಪ್ರತಿ ಮೂರು ತಿಂಗಳಿಗೆ ವರದಿ ಸಲ್ಲಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಆ ವರದಿಯನ್ನೂ ಸಲ್ಲಿಸಲಾಗುವುದು’ ಎಂದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಸಂರಕ್ಷಣಾಧಿಕಾರಿ 2024ರ ಜುಲೈ 20ರಂದು ಹೊರಡಿಸಿರುವ ಅಧಿಕೃತ ಜ್ಞಾಪನಾದಂತೆ 20 ಮರಗಳನ್ನು ಸ್ಥಳಾಂತರಿಸಲು ಮತ್ತು 41 ಮರಗಳನ್ನು ತೆರವುಗೊಳಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT