ಬೆಂಗಳೂರು: ವೈಟ್‌ಫೀಲ್ಡ್–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗ ಶನಿವಾರ ಉದ್ಘಾಟನೆಯಾಗಲಿದ್ದು, ಆ ಮೂಲಕ ದೇಶದ ಎರಡನೇ ಅತಿದೊಡ್ಡ ಮೆಟ್ರೊ ರೈಲು ಮಾರ್ಗವಾಗಿ ‘ನಮ್ಮ ಮೆಟ್ರೊ’ ಹೊರ ಹೊಮ್ಮಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದು, ಭಾನುವಾರದಿಂದ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದೆ. ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿತ ಮೂರನೇ ಮಾರ್ಗ ಇದಾಗಿದ್ದು, ನಾಗಸಂದ್ರ- ಮಾದಾವರ ನಡುವಿನ ಮಾರ್ಗ ಇನ್ನೂ ಬಾಕಿ ಇದೆ.
ಶನಿವಾರ ಉದ್ಘಾಟನೆಯಾಗುತ್ತಿರುವ ಮಾರ್ಗವನ್ನು ಐಟಿ ಕಾರಿಡಾರ್ ಮಾರ್ಗ ಎಂದು ಕರೆಯಲಾಗುತ್ತಿದೆ. ಆದರೆ, ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ ನಡುವೆ ಕಾಮಗಾರಿ ಬಾಕಿ ಇರುವುದರಿಂದ ನೇರ ಸಂಪರ್ಕಕ್ಕೆ ಪ್ರಯಾಣಿಕರು ಇನ್ನೂ ಮೂರ್ನಾಲ್ಕು ತಿಂಗಳು ಕಾಯಬೇಕಿದೆ. ಆ ತನಕ ಬೈಯ್ಯಪ್ಪನಹಳ್ಳಿ–ಕೆ.ಆರ್.ಪುರ ನಡುವೆ ಬಿಎಂಟಿಸಿ ಫೀಡರ್ ಬಸ್‌ಗಳನ್ನು ಜನ ಅವಲಂಬಿಸಬೇಕಾಗಿದೆ.
ಇದರ ನಡುವೆಯೂ ಹಲವು ಹೆಗ್ಗಳಿಕೆಯನ್ನು ಈ ಮಾರ್ಗ ಹೊಂದಿದೆ. ಈವರೆಗೆ ನಗರದಲ್ಲಿ ಉದ್ಘಾಟನೆಯಾಗಿರುವ ಮೆಟ್ರೊ ಮಾರ್ಗಗಳಲ್ಲೇ ಇದು ಉದ್ದನೆಯ ಮಾರ್ಗ(13.71 ಕಿಲೋ ಮೀಟರ್) ಇದಾಗಿದೆ. ದೇಶದಲ್ಲೇ ಅತೀ ದೊಡ್ಡ ಮೆಟ್ರೊ ಜಾಲ ಹೊಂದಿರುವ ನಗರ ಎಂದರೆ ದೆಹಲಿಯಾಗಿದ್ದು, 2ನೇ ಸ್ಥಾನದಲ್ಲಿ ಹೈದರಾಬಾದ್ ಇತ್ತು. 69.66 ಕಿಲೋ ಮೀಟರ್ ಮೆಟ್ರೊ ಮಾರ್ಗವನ್ನು ‘ನಮ್ಮ ಮೆಟ್ರೊ’ ಹೊಂದುತ್ತಿದ್ದು, ಶನಿವಾರದಿಂದ ಹೈದರಾಬಾದ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿಯಲಿದೆ.
ಹಸಿರು ಮಾರ್ಗ 30 ಕಿಲೋ ಮೀಟರ್ ಇದ್ದರೆ, ನೇರಳ ಮಾರ್ಗ 25.60 ಕಿ.ಮೀ ಇತ್ತು. ಶನಿವಾರ ವೈಟ್‌ಫೀಲ್ಡ್ ತನಕ ಮೆಟ್ರೊ ರೈಲು ಸಂಚರಿಸಿದರೆ 39.31 ಕಿ.ಮೀಗೆ ಹೆಚ್ಚಾಗಲಿದೆ. ನಿತ್ಯ ಒಂದೂವರೆ ಲಕ್ಷ ಜನ ಇದರ ಅನುಕೂಲ ಪಡೆದುಕೊಳ್ಳಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದು, ಪೂರ್ಣ ಮಾರ್ಗ ಜೋಡಣೆಯಾದ ಬಳಿಕ ಕನಿಷ್ಠ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಹೊಸ ಮಾರ್ಗದಲ್ಲಿ 12 ನಿಲ್ದಾಣ
ಹೊಸ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಕೆಲವು ನಿಲ್ದಾಣಗಳಿಗೆ ಐಟಿ ಕಂಪನಿಗಳ ಹೆಸರುಗಳನ್ನು ಜೋಡಿಸಿ ಹೆಸರಿಡಲಾಗಿದೆ.
ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀಸತ್ಯ ಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್‌ಫಾರ್ಮ್ ಚನ್ನಸಂದ್ರ, ವೈಟ್‍ಫೀಲ್ಡ್ (ಕಾಡುಗೋಡಿ) ಎಂಬ ಹೆಸರುಗಳನ್ನು ಇಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.