ಶುಕ್ರವಾರ, ಜನವರಿ 22, 2021
28 °C

ವಾಚಕರವಾಣಿ | ನಾಟಕ ಅಕಾಡೆಮಿ ಪ್ರಶಸ್ತಿ ಅಸಿಂಧು: ಅನೌಚಿತ್ಯದ ಪರಮಾವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ನಾಟಕ ಅಕಾಡೆಮಿಯ ನಿರ್ಗಮಿತ ಕಾರ್ಯಕಾರಿ ಸಮಿತಿ ಘೋಷಿಸಿದ್ದ ಪ್ರಶಸ್ತಿ ಪಟ್ಟಿಯನ್ನು ಅಸಿಂಧುಗೊಳಿಸಲು ಅಕಾಡೆಮಿಯ ಈಗಿನ ಕಾರ್ಯಕಾರಿ ಸಮಿತಿ ಮುಂದಾಗಿರುವುದು ಅನೌಚಿತ್ಯದ ಪರಮಾವಧಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಸಾಂಸ್ಕೃತಿಕ ಸಂಸ್ಥೆಗಳನ್ನು ರಾಜಕೀಯಕರಣಗೊಳಿಸುತ್ತಾ ಬರುತ್ತಿರುವುದು ದುರದೃಷ್ಟಕರ.

ಹೀಗೆ ಮಾಡುವುದು ಆರಂಭವಾಗಿ ಹಲವಾರು ವರ್ಷಗಳೇ ಆಗಿವೆ. ಸಾಹಿತಿಗಳು, ಕಲಾವಿದರು ತಮ್ಮದೇ ಆದ ರಾಜಕೀಯ ನಿಲುವುಗಳನ್ನು ಹೊಂದುವುದು ತಪ್ಪಲ್ಲ. ಆದರೆ ಅವರನ್ನು, ಅವರ ಬರವಣಿಗೆಯನ್ನು ಅಥವಾ ಅವರ ಕೃತಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ನೇರವಾಗಿ ತಳಕು ಹಾಕುವುದು ಮಾತ್ರ ಸರಿಯಲ್ಲ.

ಇದನ್ನೂ ಓದಿ: ನಾಟಕ ಅಕಾಡೆಮಿ ಪ್ರಶಸ್ತಿ ರದ್ದು

ಯಾವ ಪಕ್ಷದ ನೇತೃತ್ವದ ಸರ್ಕಾರದ ಕಾಲದಲ್ಲಿ ಈ ಸಂಸ್ಥೆಗಳಿಗೆ ನೇಮಕಾತಿಗಳಾಗಿದ್ದರೂ ನೇಮಕ
ಗೊಂಡವರ ಅವಧಿ ಮುಗಿಯುವವರೆಗೆ ಅವರನ್ನು ಬದಲಾಯಿಸದಿರುವ ಸತ್ಸಂಪ್ರದಾಯವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಸರ್ಕಾರದ ನೀತಿಯನ್ನು ಒಪ್ಪದೆ ತಾವಾಗಿಯೇ ರಾಜೀನಾಮೆ ಕೊಟ್ಟು ಹೋಗುವವರು ಬೇಕಿದ್ದರೆ ಹೋಗಲಿ. ಬಹುಶಃ ಹಾಗೆಯೇ ಆಗುತ್ತಿತ್ತೋ ಏನೋ. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪದಾಧಿಕಾರಿ ಗಳಾಗಿದ್ದ ಕೆಲವರು ನೇರವಾಗಿ ಸರ್ಕಾರದೊಂದಿಗೆ ಮತ್ತು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರಿಂದ ಈ ಬದಲಾವಣೆಗೆ ಸರ್ಕಾರ ಹೊರಟಿತು ಎನಿಸುತ್ತದೆ.

ಯಾರೇ ಆಯ್ಕೆ ಮಾಡಿದರೂ ಆಯ್ಕೆಯಾದವರೆಲ್ಲರೂ ಅತ್ಯಂತ ಅರ್ಹರೇ ಆಗಿರುವುದಿಲ್ಲ. ಅದಕ್ಕೆ ಅತ್ಯಂತ ಖಚಿತವಾದ ಮಾನದಂಡಗಳೇನೂ ಇರುವುದಿಲ್ಲ. ಜೊತೆಗೆ ಪ್ರದೇಶವಾರು, ಜಾತಿವಾರು, ಲಿಂಗವಾರು ಪರಿಗಣನೆಗಳನ್ನೂ ಕಡೆಗಣಿಸಲಾಗುವುದಿಲ್ಲ. ಆದರೆ ಒಮ್ಮೆ ಆಯ್ಕೆಯಾಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾದ ಮೇಲೆ ಅದನ್ನು ಎಲ್ಲರೂ ಪುರಸ್ಕರಿಸಬೇಕು. ಕಾರಣ ಅವರೆಲ್ಲರೂ ಆಯಾ ಕ್ಷೇತ್ರದಲ್ಲಿ ತಮ್ಮ ಪಾಲಿನ ಕೊಡುಗೆ ನೀಡಿದವರೇ ಆಗಿರುತ್ತಾರೆ. ಅದನ್ನು ರದ್ದುಪಡಿಸುವುದೆಂದರೆ ಅವರನ್ನು ಮಾತ್ರ ಅವಮಾನಿಸಿದಂತಲ್ಲ; ಇಡೀ ಸಾಂಸ್ಕೃತಿಕ ಲೋಕವನ್ನೇ ಅವಮಾನಿಸಿದಂತೆ.

ಹಿಂದಿನ ಪಟ್ಟಿಯನ್ನೇ ಮಾನ್ಯ ಮಾಡಿ, ಅವರನ್ನೇ ಪುರಸ್ಕರಿಸಬೇಕಾಗಿರುವುದು ಅಕಾಡೆಮಿಯ ಈಗಿನ ಅಧ್ಯಕ್ಷರು ಮತ್ತು ಸದಸ್ಯರ ಸಾಂಸ್ಕೃತಿಕ ಜವಾಬ್ದಾರಿ.

ಡಾ. ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

 

ಇನ್ನಷ್ಟು... 

ನಾಟಕ ಅಕಾಡೆಮಿ: ಪ್ರಶಸ್ತಿ ಪಟ್ಟಿ ಪರಿಷ್ಕರಣೆ ಬೇಡ  

ನಾಟಕ ಅಕಾಡೆಮಿ ಪ್ರಶಸ್ತಿ ವಾಪಸ್: ರಂಗಕರ್ಮಿ ಬನ್ನಾಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.